ಗೃಹ ಪ್ರವೇಶ

 

ಚಿತ್ರಕೃಪೆ: ಕಿರಣ್ ಮಾಡಾಳು


ಸೂರ್ಯನು ಕೆಂಪಾನೆ ಕೆಂಪಾಗಿ ತನ್ನ ದೇಹದ ನೆತ್ತರನ್ನೆಲ್ಲ ಇಡೀ ಭೂಮಿಗೆ ಚೆಲ್ಲುತ್ತಿದ್ದ. ಹೊತ್ತು ಮುಳುಗಲು ಇನ್ನರ್ಧ ತಾಸಿತ್ತಷ್ಟೇ. ಗಂಗವ್ವ ನೆತ್ತಿಯ ಮೇಲೆ ಸೌದೆಯ ಹೊರೆಯನ್ನು ಹೊತ್ತುಬಂದಳು. ಬಂದವಳೇ ಅಂಗಳದ ಮೂಲೆಯಲ್ಲಿ ಹೊರೆ ಇಳಿಸಿ, ಕೈಗೆ ಕಸಪೊರಕೆ ಹಿಡಿದು ಅಂಗಳದ ಕಸವನ್ನ ಗುಡಿಸ ಹತ್ತಿದಳು.

ಅಂಗಳದ ತುಂಬಾ ಕಸಪೊರಕೆ ಸರಬರ ಎಂದು ಸದ್ದೊರಡಿಸುವಾಗ, ತಮ್ಮದೇ ಕೇರಿಯಲ್ಲಿ ಭರ್ ಭರ್ರೆಂದು ಮೋಟಾರ್ ಬೈಕಿನ ಸದ್ದು ಕಿವಿಗೆ ಬಿತ್ತು. ಅದು ತೀರಾ ಸಮೀಪ ಬಂದು ತಮ್ಮ ಮನೆಯಂಗಳದಲ್ಲೇ ಸದ್ದು ನಿಶ್ಯಬ್ದವಾದಾಗ ಗಂಗವ್ವ ತಲೆಯೆತ್ತಿ ನೋಡಿದಳು. ಗಂಗವ್ವಳ ಮುಖದಲ್ಲಿ ಅಚ್ಚರಿ ಮತ್ತು ಸಂತೋಷವು ಜೊತೆಯಾಗಿ ಕಾಣಿಸಿಕೊಂಡು, 'ಅಣ್ಣಾ' ಎಂಬ ಹರ್ಷೋದ್ಗಾರವು ತುಟಿದಾಟಿ ಬಂತು.

'ಬಾ ಅಣ್ಣ, ಒಳಿಕ್ ಬಾ' ಎಂದು ಗಂಗವ್ವ ಕೈಯಲ್ಲಿದ್ದ ಪೊರಕೆಯನ್ನು ಅಲ್ಲಿಯೇ ಬಿಸಾಡಿ ಒಳಗೋದಳು. ಮೂರ್ತಪ್ಪ ತನ್ನ ಮೋಟಾರ್ ಬೈಕನ್ನು ಅಂಗಳದ ಮೂಲೆಯಲ್ಲಿ ಸ್ಟಾಂಡ್ ಹಾಕಿ ನಿಲ್ಲಿಸಿ ಮನೆಯೊಳಗಡಿಯಿಟ್ಟ.

ತುಂಬಾ ವರ್ಷಗಳ ನಂತರ ಅಣ್ಣ ಮನೆಗೆ ಬಂದ ಖುಷಿಗೆ ಗಂಗವ್ವ ಮನೆತುಂಬಾ ಓಡಾಡಿದಳು. ಗಂಗವ್ವಳ ಮದುವೆಯಾದ ಮೇಲೆ ಕಿಟ್ಟಿಯ ನಾಮಕರಣಕ್ಕೆ ಬಂದಿದ್ದು. ಅದಾದ ಮೇಲೆ ಎಂಟು ವರ್ಷಗಳ ನಂತರ ಮೂರ್ತಪ್ಪ ಮತ್ತೆ ಈಗಲೇ ತಂಗಿ ಮನೆಗೆ ಬಂದಿರುವುದು.

ಸರಕಾರಿ ನೌಕರಿಯಲ್ಲಿರುವ ಅಣ್ಣನನ್ನು ಕೂರಿಸಲು ಮನೆಯಲ್ಲೊಂದು ಕುರ್ಚಿಯೂ ಗತಿಯಿಲ್ಲವೆಂದು ನೊಂದುಕೊಳ್ಳುತ್ತ ಗಂಗವ್ವ ಚಾಪೆಯನ್ನೇ ಹಾಸಿದಳು. ಅಷ್ಟೊತ್ತಿಗೆ ಹನುಮಂತನ ಗುಡಿಗೆ ಹೋಗಿದ್ದ ಗಂಗವ್ವನ ಅತ್ತೆ ರಂಗಮ್ಮನೂ ಬಂದರು. 'ಚೆನ್ನಾಗಿದ್ದೀರ ಅಮ್ಮ?' ಎಂದ ಮೂರ್ತಪ್ಪನ ಮಾತಿಗೆ ರಂಗಮ್ಮ ಬರೀ 'ಹೂಂ' ಎಂದಷ್ಟೇ ತಲೆಯಾಡಿಸಿ, ಮತ್ತೆ ಮನೆಯಲ್ಲಿ ನಿಲ್ಲದೇ ಹೊರ ಹೋದವರು ಪಕ್ಕದ ಮನೆ ಲಕ್ಷ್ಮಮ್ಮನ ಜೊತೆ ಮಾತುಕತೆಗೆ ಕೂತರು.

ಅತ್ತೆ ಅಣ್ಣನಿಗೆ ಸರಿಯಾಗಿ ಮುಖ ಕೊಟ್ಟು ಮಾತನಾಡಿಸಲಿಲ್ಲವೆಂಬ ನೋವು ಗಂಗವ್ವಳ ಮನಸನ್ನು ಚುಚ್ಚಿತು. ಆದರೆ ಮೂರ್ತಪ್ಪ ಮಾತ್ರ ಆ ಅವಮಾನಗಳನ್ನ ಲೆಕ್ಕಕ್ಕೆ ಇಡಲಿಲ್ಲ. ಪ್ರೀತಿಸಿದಾಕೆಯನ್ನೇ ಮದುವೆಯಾದ ತಪ್ಪಿಗೆ ಮೂರ್ತಪ್ಪನ ಮನಸ್ಸು ಎಷ್ಟೋ ಬಂಧುಗಳ ಮನೆಯಲ್ಲಿ ಈ ಅವಮಾನವನ್ನು ಚಪ್ಪರಿಸಿತ್ತು.

ಟಯರ್ ಬಂಡಿಯನ್ನಾಡುತ್ತಾ ಬಂದ ಕಿಟ್ಟಿ ಮನೆಯಂಗಳದಲ್ಲಿ ಮೋಟಾರ್ ಬೈಕು ನಿಂತಿರುವುದನ್ನು ನೋಡಿ ಮನೆಗೆ ಯಾರೋ ನೆಂಟರು ಬಂದಿದ್ದಾರೆಂಬುದನ್ನು ಮನಸ್ಸಿಗೆ ಖಾತರಿ ಮಾಡಿಕೊಂಡ. ಉರುಳಿಸುತ್ತಿದ್ದ ಸೈಕಲ್ ಟಯರ್ ನ ಅಲ್ಲಿಯೇ ಮನೆಂಗಳದಲ್ಲಿ ಮೂಲೆಗೆಸೆದು ಮನೆಯೊಳಗೆ ಬಂದ. ಮೂರ್ತಪ್ಪನನ್ನು ನೋಡಿದ ಕಿಟ್ಟಿ ಬಾಗಿಲ ಬಳಿಯೇ ನಿಂತುಬಿಟ್ಟ. 'ಬಾರೋ ಕಿಟ್ಟಿ' ಎಂದು ಮೂರ್ತಪ್ಪ ಆತ್ಮೀಯವಾಗಿ ಕರೆದರು. ಒಂದು ವರ್ಷದ ಹಿಂದೆ ಬಂಧುಗಳೊಬ್ಬರ ಅಂತ್ಯಸಂಸ್ಕಾರಕ್ಕೆ ಅವ್ವನ ಜೊತೆ ಹೋಗಿದ್ದಾಗ ಅಲ್ಲಿ ಮೂರ್ತಪ್ಪನನ್ನು ನೋಡಿದ್ದು ಕಿಟ್ಟಿಯ ನೆನಪಿಗೆ ಬಂತು. ಆಗ 'ಇವರು ನಿಮ್ಮಾವ ಕಣೋ' ಎಂದು ಅವ್ವ ಹೇಳಿದ್ದಳು. ಅದೇ ಸಲುಗೆಯಿಂದ ಕಿಟ್ಟಿ ಸೀದಾ ಬಂದು ಮಾವನ ತೊಡೆಯ ಮೇಲೇರಿ ಕುಳಿತುಬಿಟ್ಟ.

ಗಂಗವ್ವಳ ಗಂಡ ರಂಗಪ್ಪಗೌಡ ಎತ್ತುಗಳ ವ್ಯಾಪಾರಕ್ಕೆಂದು ಮಾರಿ ಪರಿಷೆಗೆ ಹೋಗಿದ್ದ. ಈ ವಿಷಯವನ್ನು ಗಂಗವ್ವಳೇ ತನ್ನಣ್ಣನಿಗೆ ಒಪ್ಪಿಸಿದಳು. ಅಷ್ಟು ದೂರದಿಂದ ತುಂಬಾ ಅಪರೂಪಕ್ಕೆ ಬಂದಿರುವ ಅಣ್ಣನಿಗೆ ಮೊದಲು ಕಾಫಿ ಮಾಡಿಕೊಡಬೇಕೆಂದುಕೊಂಡಳು. ಆದರೆ ನಮ್ಮನೇಲಿ ಬೆಲ್ಲದ ಕಾಫಿ ಕಾಯಿಸೋದು. ಅಣ್ಣನಿಗೂ ಅದನ್ನೇ ಮಾಡಿಕೊಡುವುದು ಹೇಗೆಂದು? ಪಕ್ಕದ ಮನೆಯಿಂದ ಒಂದು ಲೋಟ ಸಕ್ಕರೆಯನ್ನು ಸಾಲವಾಗಿ ತಂದು ಗಂಗವ್ವ ಕಾಫಿಗಿಟ್ಟಳು.

ಕಿಟ್ಟಿ ಪೈಪಿರುವ ಲೋಟದಲ್ಲಿ ಬಳುಬುಳು - ಗುಳುಗುಳು ಸದ್ದು ಮಾಡಿ ಇಷ್ಟಿಷ್ಟೇ ಕಾಫಿಯನ್ನು ಹೀರುತ್ತಿದ್ದ. ಮೂರ್ತಪ್ಪ ಕಾಫಿಯನ್ನು ಗುಟುಕರಿಸುತ್ತಾ ಮಾತಿಗಾರಂಭಿಸಿದ. 'ಗಂಗಾ ಹೊಸಮನೆ ಕಟ್ಟಿಸಿದ್ದೇನೆ. ಮುಂದಿನ ಗುರುವಾರ ಗೃಹ ಪ್ರವೇಶ. ಅದನ್ನ ಹೇಳೋಕಂತಲೇ ಬಂದಿದ್ದು. ನೀನು ಬಾ, ಜೊತೆಗೆ ಎಲ್ಲರನ್ನೂ ಕರೆದುಕೊಂಡು ಬಾ. ನಾನು ಯಾವತ್ತೋ ಮಾಡಿದ ತಪ್ಪಿಗೆ ಎಲ್ಲರೂ ನನ್ನನ್ನ ದೂರವೆ ಇಟ್ಟಿದ್ದಾರೆ ಕಣೆ. ನೀನೂ ಬರದೆ ಇರಬೇಡ. ಈ ಅಣ್ಣನ ಮರೆಯಬೇಡ' ಎನ್ನುವಷ್ಟರಲ್ಲಿ ಮೂರ್ತಪ್ಪನ ಕಣ್ಣುಗಳು ಒದ್ದೆಯಾದವು. ತನಗರಿವಿಲ್ಲದೇ ಆತನ ಕೈಯೊಂದು ಪ್ಯಾಂಟಿನ ಕಿಸೆಯಿಂದ ಕರ್ಚೀಫನ್ನ ಹೊರಗೆಳೆಯಿತು.

ಅಣ್ಣನ ಮಾತಿಗೆ ಗಂಗವ್ವ 'ಬಾಳ ಸಂತೋಷ ಆಯ್ತಣ್ಣ. ಖಂಡಿತ ಬರ್ತೀವಿ. ಎಲ್ಲರೂ ಬರ್ತೀವಿ' ಹೀಗೆಂದಳಾದರೂ, ಮನದಲ್ಲಿ ಮಾತ್ರ- ಇವರು ಕಳಿಸುವರೋ, ಹೇಗೋ? ಎಂಬ ಅನುಮಾನವಂತೂ ಇತ್ತು.
ವಿಜಯ next ಪತ್ರಿಕೆಯಲ್ಲಿ ಪ್ರಕಟಿತವಾದ ಕತೆ


'ಕತ್ತಲಾಗಿದೆ, ಇವತ್ತಿದ್ದು ಬೆಳಿಗ್ಗೆ ಹೋಗುವಂತೆ' ಎಂದು ಗಂಗವ್ವ ತನ್ನಣ್ಣನಿಗೆ ಹೇಳಿದಳು. ಆದರೆ ಮೂರ್ತಪ್ಪ 'ಇಲ್ಲ ಕಣೋ ಗಂಗಾ ತುಂಬಾ ಕೆಲಸಗಳಿವೆ, ಹೋಗಲೇಬೇಕೆಂದು' ಹೊರಟು ನಿಂತಾಗ, 'ಹೋಗಲಿ ಅಡುಗೆ ಮಾಡ್ತೀನಿ ಉಂಡಾದರೂ ಹೊರಡು' ಗಂಗವ್ವ ಅಣ್ಣನಿಗೆ ಬಲವಂತ ಮಾಡಿದಳು. ಆದರೆ ಮೂರ್ತಪ್ಪ ತನಗಿರುವ ಕೆಲಸಗಳನ್ನ ನೆನೆದು, ನಯವಾಗಿಯೇ ತಂಗಿಯ ಮನಸ್ಸಿಗೆ ನೋವಾಗದಂತೆ ಬರುವುದಾಗಿ ತಿಳಿಸಿ ಹೊರಟೇಬಿಟ್ಟ.

ಹೊರಡುವ ಮುನ್ನ ಹತ್ತರ ನೋಟೊಂದನ್ನ ಕಿಟ್ಟಿಯ ಕೈಗಿಟ್ಟ ಮೂರ್ತಪ್ಪ ಮತ್ತೊಮ್ಮೆ ತಂಗಿಗೆ 'ಗಂಗಾ ಎಲ್ಲರೂ ಬರಬೇಕು' ಅಂತೇಳಿದರೆ, ಗಂಗವ್ವ 'ಹೂಂ ಸರಿ' ಎಂದು ತಲೆಯಾಡಿಸಿದಳು. ತನ್ನಣ್ಣನ ಮೋಟಾರ್ ಬೈಕು ಕಣ್ಮರೆಯಾಗುವವರೆಗೂ ಗಂಗವ್ವ ನೋಡುತ್ತಲೇ ನಿಂತಿದ್ದಳು. ಕಿಟ್ಟಿ ಆಗಲೇ ತನ್ನ ಕೈಯಲ್ಲಿದ್ದ ಹಣವನ್ನು ಖರ್ಚು ಮಾಡಲು ಅಂಗಡಿ ಮನೆಯತ್ತ ಓಡಿದ್ದ.

ಮೂರ್ತಪ್ಪ ಅತ್ತ ಹೋಗುತ್ತಲೇ ಮನೆಗೆ ಬಂದ ರಂಗಮ್ಮ, ಗಂಗವ್ವಳಿಗೆ ಕೇಳಿಸುವಂತೆ, ಮೂರ್ತಪ್ಪ ಕಾಫಿ ಕುಡಿದ ಲೋಟವನ್ನು 'ಥೂ ಕುಲಗೆಟ್ಟವನು ಮುಟ್ಟಿದ್ದು' ಅಂತೇಳಿ ಗೊಣಗುತ್ತಾ ಮೂರು ಬಾರಿ ನಿರ್ಮಾ ಸೋಪಿನ ನೊರೆಯಲ್ಲಿ ತಿಕ್ಕಿ ತೊಳೆದರು.

ಗಂಗವ್ವನ ಕರುಳಿನಲ್ಲಿ ಬೆಂಕಿ ಉರಿದಂತಾಯ್ತು.

ಗಂಗವ್ವ ತಾನು ಹುಟ್ಟಿದ ಆರು ತಿಂಗಳಿಗೆ ತಾಯಿಯನ್ನು ಕಳೆದುಕೊಂಡ ನತದೃಷ್ಟೆ. ಅಪ್ಪ ಎರಡ್ಮೂರು ಕಡೆ ಸಂಬಂಧವನ್ನಿಟ್ಟುಕೊಂಡಿದ್ದ. ಮತ್ತಿನ್ನೆಲ್ಲಿ ಮನೆಗೆ ಬರುವುದು? ಗಂಗವ್ವ ಮತ್ತು ಆಕೆಯ ಇಬ್ಬರು ಅಣ್ಣಂದಿರು ಬೆಳೆದಿದ್ದೆಲ್ಲವು ಚಿಕ್ಕಪ್ಪನ ಮನೆಯಲ್ಲೇ. ಗಂಗವ್ವಳ ಮದುವೆ, ಹೆರಿಗೆ, ಬಾಣಂತನವನ್ನ ಮಾಡಿದ್ದೆಲ್ಲವೂ ಚಿಕ್ಕಪ್ಪನ ಮಡದಿ ಚಿಕ್ಕವ್ವ.

ಗಂಗವ್ವಳ ಹಿರಿಯ ಅಣ್ಣ ಶಂಕ್ರಪ್ಪ ಅಪಘಾತದಲ್ಲಿ ತೀರಿಕೊಂಡ ಮೇಲೆ ಶಂಕ್ರಪ್ಪನ ಕುಟುಂಬ ಯಾವುದೋ ದೂರದ ಊರಿನಲ್ಲಿ ನೆಲೆಸಿತ್ತು. ಎರಡನೆಯ ಅಣ್ಣ ಮೂರ್ತಪ್ಪ ಲಂಬಾಣಿಗರ ಹುಡುಗಿಯನ್ನು ನೋಡಿ, ಮೆಚ್ಚಿ,  ಪ್ರೀತಿಸಿ, ಎಲ್ಲರ ವಿರೋಧಗಳನ್ನ ಲೆಕ್ಕಿಸದೇ ಮದುವೆಯಾದ. ಮೂರ್ತಪ್ಪ ಹೀಗೆ ಮದುವೆಯಾದ ಮೇಲೆ ಬಂಧುಗಳು ಅವನನ್ನು ದೂರವೇ ಇಟ್ಟರು. ಮನೆಯಲ್ಲಿ ಹೆಣ ಬಿದ್ದಾಗ ಮಾತ್ರ ಮಣ್ಣಿಗೆ ಕರೆದರೆ ಹೊರತೂ, ಹಬ್ಬ-ಹರಿದಿನಗಳಲ್ಲಿ ಯಾರೊಬ್ಬರೂ ಮೂರ್ತಪ್ಪನ ಕುಟುಂಬವನ್ನು ಕರೆದು ಕಳಿಸಲಿಲ್ಲ.

ಮೂರ್ತಪ್ಪ ಹೀಗೆ ಎಲ್ಲರಿಂದಲೂ ದೂರವೇ ಉಳಿದಿದ್ದ.

ಗಂಡ ಎಷ್ಟೇ ಒಳ್ಳೆಯವನಾದರೂ, ಎಷ್ಟೇ ಪ್ರೀತಿಸಿದರೂ ಪ್ರತಿ ಹೆಣ್ಣಿಗೂ ತವರೆಂಬುದು ಇರಲೇಬೇಕು. ಮತ್ತು ಹೆಣ್ಣಿಗೆ ತವರಿನ ತುಡಿತ ಇದ್ದೇ ಇರುತ್ತದೆ. ಆದರೆ ಗಂಗವ್ವನ ಪಾಲಿಗೆ ತವರೆಂಬುದೇ ಇರಲಿಲ್ಲ. ಆಕೆಯ ಪಾಲಿಗೆ ತವರು ದೂರದ ಕನಸಾಗಿಯೇ ಉಳಿಯಿತು.

ಅಣ್ಣ ನನ್ನನ್ನು ಕರೆಯಲು ಬಂದಿದ್ದಾನೆ. ಮತ್ತೆ ನಾನು ತವರಿಗೆ ಹೋಗುತ್ತೇನೆ. ಕನಸಾಗಿಯೇ ಉಳಿದಿದ್ದ ತವರೀಗ ನನ್ನ ಪಾಲಿಗೆ ನನಸಾಗುತ್ತಿದೆ. ಗಂಗವ್ವನ ಮನಸ್ಸು ಸಂತಸದಿಂದ ಹೂವಿನಂತೆ ಅರಳಿ ಇಡೀ ರಾತ್ರಿ ನಿದ್ದೆ ಮಾಡದೆಯೇ ಅತ್ತಿತ್ತ ಹೊರಳಾಡಿದಳು.

ಪರಿಷೆ ಮುಗಿಸಿ ಬಂದ ರಂಗಪ್ಪಗೌಡನ ಬಳಿ ಗಂಗವ್ವ ಅಣ್ಣ ಬಂದುಹೋದ ವಿಷಯವನ್ನು ತಿಳಿಸಿದಳು. 'ಗೃಹ ಪ್ರವೇಶಕ್ಕೆ ಹೋಗಿ ಬರೋಣ' ಅಂದಾಗ- 'ಇನ್ನೂ ದಿನಗಳಿವೆಯಲ್ಲ ನೋಡೋಣ ತಗೋ' ಅಂದಿದ್ದ ರಂಗಪ್ಪ.

ನಾಳೆಯೇ ಗೃಹ ಪ್ರವೇಶ ಅಂದಾಗ ಗಂಗವ್ವ ಮತ್ತೆ ನೆನಪಿಸಿದಳು. ರಂಗಪ್ಪಗೌಡ ತನ್ನ ಕಿಸೆಯಲ್ಲಿದ್ದ ಹಣವನ್ನು ಎಣಿಸದೆಯೇ ಕೈಗಿತ್ತು - 'ನಾನು ಬರಲಾಗೋಲ್ಲ. ನೀನು ಹೋಗಿ ಬಾ. ಜೊತೆಗೆ ಕಿಟ್ಟಿಯನ್ನೂ ಕರೆದುಕೊಂಡು ಹೋಗು. ಆತುರಕ್ಕೆ ಹೋಗಿ ಬರಬೇಡ. ಅಣ್ಣನ ಮನೆಯಲ್ಲೊಂದಿನ ಇದ್ದು ಬಾ' ಅಂದುಬಿಟ್ಟ.

ಗಂಗವ್ವನ ಹೃದಯಕ್ಕೆ ರೆಕ್ಕೆಗಳು ಮೂಡಿದವು.

ಮೂರ್ತಪ್ಪ ಭಾರೀ ದೊಡ್ಡ ಮನೆಯನ್ನೇ ಕಟ್ಟಿಸಿದ್ದ. ಮನೆಯ ಮೂಲೆ ಮೂಲೆಯಲ್ಲಿಯೂ ಸಿರಿತನವಿತ್ತು. ಗಂಗವ್ವ ತನ್ನಣ್ಣನ ಮನೆಯನ್ನು ಬೆರಗಿನಿಂದ ನೋಡಿದಳು. ಅಲ್ಲಿಗೆ ಬಂದವರಲ್ಲಿ ಗಂಗವ್ವಳ ಬಂಧುಗಳಿಗಿಂತಲೂ ಹೆಚ್ಚಾಗಿ ಅಣ್ಣನ ಸ್ನೇಹಿತರು, ಪರಿಚಿತರು, ಅಣ್ಣನ ಹೆಂಡತಿಯ ಬಂಧು - ಬಳಗವಿತ್ತು. ತಂಗಿ ಬಂದಿದ್ದು ಮೂರ್ತಪ್ಪನ ಮನಸಿಗೆ ಹೆಚ್ಚು ಸಂತೋಷ ತಂದಿತ್ತು. ಆದರೆ ಗಂಗವ್ವಳ ಅತ್ತಿಗೆ ಅಷ್ಟೇನೂ ಅಕ್ಕರೆಯಿಂದ ಮಾತಾಡಿಸಲಿಲ್ಲ.

ಬಂದವರೆಲ್ಲ ದೊಡ್ಡ ದೊಡ್ಡ ಉಡುಗೊರೆಯನ್ನು ಕೊಡುವಾಗ, ಕುಬುಸದಿಂದ ಹೊರಗೆಳೆದ ಪರ್ಸಿನಿಂದ ನೂರು ರೂಪಾಯಿಯ ನೋಟೊಂದನ್ನ ತೆಗೆದು ಗಂಗವ್ವ ಸಂಕೋಚದಿಂದಲೇ ತನ್ನಣ್ಣನ ಕೈಗಿಟ್ಟಳು.

ಊಟಕ್ಕೆ ಬಗೆ ಬಗೆಯ ತಿನಿಸುಗಳನ್ನೇ ಮಾಡಿಸಿದ್ದು, ಸಿಹಿಗೆ ಮೈಸೂರ್ ಪಾಕು ಮಾಡಿಸಿದ್ದರು. ಕಿಟ್ಟಿಗೆ ಮೈಸೂರ್ ಪಾಕಿಗಿಂತಲೂ ಹೆಚ್ಚಾಗಿ ಮನಸಿಗಿಡಿಸಿದ್ದು ಮಾವನ ಮಗಳು ರಾಧೆಯ ಕೈಯಲ್ಲಿದ್ದ ಹೆಣ್ಣುಗೊಂಬೆ.

ಊಟ ಮುಗಿದ ನಂತರ 'ಊಟ ಮಾಡಿದ್ರಾ?' ಎಂದು ಅತ್ತಿಗೆ ಕೇಳಿದಾಗ, ಗಂಗವ್ವ 'ಹೂಂ' ಎಂದು ತಲೆಯಾಡಿಸಿದಳು. 'ಸರಿ ಹಾಗಾದ್ರೆ ನೀವಿನ್ನು ಹೊರಡುವಿರಾ? ಊರಿಗೆ ಹೋಗುವ ವೇಳೆಗೆ ಕತ್ತಲಾಗಬಹುದೇನೋ?' ಅತ್ತಿಗೆ ಹೀಗೆಂದಾಗ, ಗಂಗವ್ವ ಮಗನ ಕೈಹಿಡಿದು ಅಣ್ಣನ ಮನೆಯಿಂದ ಹೊರ ನಡೆದಳು. ಅದೇ ಸಮಯಕ್ಕೆ ತನ್ನ ಕೈಹಿಡಿದಿದ್ದ ಅವ್ವನ ಬಳಿ- ಮಾವನ ಮಗಳು ರಾಧೇ ಕೈಯಲ್ಲಿರುವ ಗೊಂಬೆ ನನಗೂ ಬೇಕೆಂದು ಹಠ ಮಾಡಿದ ಕಿಟ್ಟಿಗೆ ಸಿಕ್ಕದ್ದು: ಬೆನ್ನ ಮೇಲೆರಡು ಅವ್ವನ ಗುದ್ದು.

ಆ ರಾತ್ರಿ ಗಂಗವ್ವ ಮತ್ತು ಕಿಟ್ಟಿ ಅದೇ ಊರಿನ ತಮ್ಮ ಮತ್ತೊಬ್ಬರು ಬಂಧುಗಳ ಮನೆಯಲ್ಲಿ ಮಲಗಿದ್ದರು. ಅವರು ಗಂಗವ್ವನ ಬಳಿ ಮೂರ್ತಪ್ಪನ ಬಗ್ಗೆ ಏನೇನೋ ಹೇಳಿದರು.

'ಮೂರ್ತಪ್ಪ ಅಮ್ಮಾವ್ರ ಗಂಡ. ತಿಂಗಳು ತಿಂಗಳು ಸಂಬಳವನ್ನೆಲ್ಲ ಹೆಂಡತಿಯ ಕೈಗಿಡುತ್ತಾನೆ. ಖರ್ಚಿಗೂ ಸಹ ಹೆಂಡತಿಯೆದುರು ಕೈಯೊಡ್ಡಬೇಕು.' ಹೀಗೆ ಏನೇನೋ ಹೇಳುತ್ತಿರುವಾಗಲೇ ತನ್ನವ್ವನ ಮಡಿಲಿಗೆ ತಲೆಯಿಟ್ಟ ಕಿಟ್ಟಿ, ರಾಧೆಯ ಕೈಯಲ್ಲಿದ್ದ ಹೆಣ್ಣುಗೊಂಬೆಯ ಕನಸು ಕಾಣುತ್ತಾ ನಿದಿರೆಗೆ ಶರಣಾಗಿದ್ದ.

ಬೆಳಿಗ್ಗೆ ವಾಪಸ್ಸು ಹೊರಡುವಾಗ ಬಸ್ಟಾಪಿನಲ್ಲಿದ್ದ ವೆಂಕಟೇಶ್ವರ ಸ್ವೀಟ್ ಸ್ಟಾಲಿನಲ್ಲಿ ಕಾಲು ಕೆಜಿ ಮೈಸೂರ್ ಪಾಕನ್ನ ಕಟ್ಟಿಸಿಕೊಂಡ ಗಂಗವ್ವ, 'ಈ ಮೈಸೂರ್ ಪಾಕ್ ಎಲ್ಲಿಂದು? ಅಂತ ನಿಮ್ಮಪ್ಪನೂ ಅಜ್ಜಿ ಕೇಳಿದರೆ ಏನು ಹೇಳ್ತೀಯ?' ಎಂದು ಮಗನನ್ನು ಪ್ರಶ್ನಿಸಿದಳು. ಅದಕ್ಕೆ ಕಿಟ್ಟಿ 'ಅಂಗಡಿಯಿಂದ ತಂದಿದ್ದು ಅಂತೀನಿ' ಅಂದ.

ಮಗನ ತೋಳಿನ ಮೇಲೆ ಜಿಗುಟುತ್ತಾ, 'ಅಯ್ಯೋ ಬೇವರ್ಸಿ, ನಿಮ್ಮಪ್ಪ-ನಿಮ್ಮಜ್ಜಿಯೆದುರು ನನ್ನ ತವರಿನ ಮರ್ಯಾದೆಯನ್ನ ಕಳೆಯಬೇಡ. ಇದು ಮಾವನ ಮನೆಯಲ್ಲಿ ಮಾಡಿದ್ದು, ಅತ್ತೆ ಕೊಟ್ಟಿದ್ದು ಅಂತೇಳು' ಎಂದು ಮಗನಿಗೆ ಹೇಳಿಕೊಟ್ಟಳು.

ತನ್ನ ಸಮಾಧಾನಕ್ಕಾಗಿ ಗಂಗವ್ವ, 'ಈಗ ಹೇಳು ಎಲ್ಲಿಂದು?' ಮತ್ತೊಮ್ಮೆ ಕಿಟ್ಟಿಯನ್ನು ಕೇಳಿದಳು.

ಕಿಟ್ಟಿ,  'ಈ ಮೈಸೂರ್ ಪಾಕು ಮಾವನ ಮನೆಯಲ್ಲಿ ಮಾಡಿದ್ದು. ಅತ್ತೆ ಕೊಟ್ಟಿದ್ದು.' ಅಂದಾಗ-

'ನನ್ನ ಜಾಣ ಕೂಸು' ಅಂತಂದು ಗಂಗವ್ವ ಮಗನ ತಲೆಗೂದಲಲ್ಲಿ ಕೈಯಾಡಿಸಿ ನೆತ್ತಿಗೆ ಮುತ್ತಿಟ್ಟಳು

***
(ಮೇ 21, 2015 ರಲ್ಲಿ ವಿಜಯ next ಪತ್ರಿಕೆಯಲ್ಲಿ ಪ್ರಕಟಿತವಾದ ಕತೆ)

ನವೀನ್ ಮಧುಗಿರಿ