ಕೊನೆಯ ಭೇಟಿ




ಕೆಲವು ವರ್ಷಗಳ ನಂತರ ಇಂದು ಮತ್ತೆ ಅಲ್ಲಿಗೆ ಹೋಗಿದ್ದೆ. ನಾನೊಬ್ಬನೇ ಅಲ್ಲಿಗೆ ಹೋಗಿದ್ದೆ. ಜೊತೆಯಲ್ಲಿ ಅವಳಿರಲಿಲ್ಲ. ಅವಳಿಲ್ಲದೇ ಹೀಗೆ ಒಬ್ಬನೇ ಅಲ್ಲಿಗೆ ಹೋಗಿದ್ದು ಎರಡನೇ ಸಲ.


ಮೊದಲಸಲ ನಾನೂ ಅವಳು ಅಲ್ಲಿಗೆ ಹೋದ ದಿನ ಈಗಲೂ ಹಸಿರಾಗಿದೆ. ಅವತ್ತು ಕೈ ಕೈಹಿಡಿದು ಆ ಬೀದಿ ಬೀದಿಗಳನ್ನೆಲ್ಲ ಸುತ್ತಿದ್ದೆವು. ಹೀಗೆ ತಿಂಗಳಿಗೊಂದು ಭಾನುವಾರ ಭೇಟಿಯಾಗುತ್ತಿದ್ದೆವು. ಒಂದು ಸಿನಿಮಾ ನೋಡುತ್ತಿದ್ದೆವು. ಅವಳಿಷ್ಟದ ಮತ್ತೊಂದು ಸ್ಥಳ ಸಪ್ನ ಬುಕ್ ಹೌಸ್ ನಲ್ಲಿ ಒಂದಷ್ಟು ಪುಸ್ತಕಗಳನ್ನ ಖರೀದಿಸುತ್ತಿದ್ದೆವು. ಅವಳಿಗೆ ಓಶೋ ಅಂದ್ರೆ ಅಚ್ಚುಮೆಚ್ಚು. ಪ್ರತಿಬಾರಿಯ ಪುಸ್ತಕ ಖರೀದಿಯಲ್ಲೂ ಒಂದೆರಡು ಓಶೋ ಪುಸ್ತಕಗಳಿರುತ್ತಿದ್ದವು. ಅವತ್ತು ಸಹ ಹಾಗೆ ಸಿನಿಮಾ ನೋಡಿ, ಸಪ್ನ ಬುಕ್ ಹೌಸ್ ನಲ್ಲಿ ಪುಸ್ತಕ ಖರೀದಿಸಿದ ನಂತರ ಆ ಹೋಟೆಲ್ ಗೆ ಹೋಗಿದ್ದು. ಮೊದಲಸಲ ಅಲ್ಲಿಗೆ ಹೋಗಿದ್ದು. ಸರ್ವರ್ ಮೆನು ಕಾರ್ಡ್ ತಂದಿಡುವ ಬೆನ್ನಿಗೆ ಒಂದು ಮಸಾಲೆ ದೋಸೆ ಆರ್ಡರ್ ಮಾಡಿದ್ದೆ. ಬಾಲ್ಯದಿಂದಲೂ ನನಗೆ ಮಸಾಲೆದೋಸೆಯ ಮೇಲೆ ಒಂಥರಾ ಪ್ರೀತಿ! 


ನಾವು ಎದುರುಬದುರು ಕುಳಿತ ಟೇಬಲ್ ನ ಎಡಬದಿಗೆ ಸೀಲಿಂಗ್ ಫ್ಯಾನ್ ಇತ್ತು. ಅದು ಚಲನೆಯಲ್ಲಿತ್ತು. ಮತ್ತು ಎದುರಿಗೆ ಕುಳಿತ ನನ್ನ  ಪ್ರೇಮದೇವತೆಯ ಮುಂಗುರುಳು! 

ಮುಂಗುರುಳು ಮತ್ತು ಮೂಗುಬೊಟ್ಟು (ಮೂಗುತಿ) ಹೆಣ್ಣಿನ ಸೌಂದರ್ಯವನ್ನು ದ್ಬಿಗುಣಗೊಳಿಸುತ್ತೆ. ಅವಳು ಮೂಗುಬೊಟ್ಟು ಧರಿಸುತ್ತಿರಲಿಲ್ಲ. ಆದರೆ ಅವಳ ಮುಂಗುರುಳೇ ಸಾಕಿತ್ತು ನನ್ನ ಹೃದಯವನ್ನು ಕುಣಿಸಲು!

ಅವತ್ತು ಫ್ಯಾನ್ ಗಾಳಿಯಲ್ಲಿ ನರ್ತಿಸುವ ಮುಂಗುರುಳ ಕುರಿತು ತಕ್ಷಣವೇ ನಾಲ್ಕೈದು ಸಾಲಿನ ಪುಟಾಣಿ ಕವಿತೆಯನ್ನು ಟಿಶ್ಯೂ ಪೇಪರ್ ಮೇಲೆ ಬರೆದು ಅವಳ ಕೈಗಿಟ್ಟಿದ್ದೆ.


ಫ್ಯಾನಿನ ಗಾಳಿಗೂ ಕೂಡ

ನಿನ್ನ ಕೆನ್ನೆ ಚುಂಬಿಸುವ 

ಹಂಬಲ

ಜೊತೆಗೆ

ಮುಂಗುರುಳ ಸಹಕಾರ











ಸುಮಾರು ದಿನಗಳ ಕಾಲ ತನ್ನ ಪರ್ಸಿನಲ್ಲಿಯೇ ಆ ಕವಿತೆಯನ್ನ ಜೋಪಾನವಾಗಿಟ್ಟಿದ್ದಳು. ಈಗದು ಅವಳ ಬಳಿ ಇದೆಯೋ ಇಲ್ಲವೋ ಗೊತ್ತಿಲ್ಲ. ಮೊದಲ ದಿನ ಒಂದೇ ಮಸಾಲೆದೋಸೆಯನ್ನ ಇಬ್ಬರೂ ಒಟ್ಟಿಗೆ ತಿಂದೆವು. ಬೈಟು ಕಾಫಿ ಕುಡಿದೆವು. ಆ ನಂತರ ಪ್ರತಿಸಲ ಭೇಟಿಯಾದಾಗಲೂ ಅಲ್ಲಿಗೆ ಹೋಗುತ್ತಿದ್ದೆವು. ಮೊದಲಸಲ ನಾವು ಕೂತಿದ್ದ ಟೇಬಲ್ ಖಾಲಿಯಾಗುವವರೆಗೂ ಕಾಯುತ್ತ ನಿಂತಿರುತ್ತಿದ್ದೆವು. ಬೇರೆ ಟೇಬಲ್ ಗಳು ಖಾಲಿಯಿದ್ದರೆ ಸರ್ವರ್ ಬಂದು ‘ಸರ್ ಈ ಟೇಬಲ್ ಖಾಲಿ ಇದೆ ಬನ್ನಿ' ಎಂದು ವಿನಮ್ರನಾಗಿ ಆಹ್ವಾನಿಸುತ್ತಿದ್ದ. ನಾವು ಸಹ ಅಷ್ಟೇ ನಯವಾಗಿ 'ಪರವಾಗಿಲ್ಲ ಬಿಡಿ. ನಾವು ಅದೇ ಟೇಬಲ್ ನಲ್ಲಿ ಕೂತ್ಕೊಳ್ತೀವಿ. ಇನ್ನೂ ಸ್ವಲ್ಪ ಹೊತ್ತು ಕಾಯ್ತೀವಿ’ ಎಂದು ನಿರಾಕರಿಸುತ್ತ, ನಮ್ಮ ಟೇಬಲ್ ಗಾಗಿ ಕಾಯುತ್ತ ನಿಂತಿರುತ್ತಿದ್ದೆವು. ಆ ಹೋಟೆಲ್ ಗೆ ‘ನಮ್ಮ ಹೋಟೆಲ್’ ಅಂತಲೂ, ನಾವು ಮೊದಲಸಲ ಕೂತು ಮಸಾಲೆದೋಸೆ ತಿಂದ ಟೇಬಲ್ ಗೆ ‘ನಮ್ಮ ಟೇಬಲ್’ ಅಂತಲೂ ನಾವು ಹೆಸರಿಟ್ಟಿದ್ದೆವು.


ಆ ದಿನ ಅವಳು ನುಡಿದ ನಾಲ್ಕು ವಾಕ್ಯಗಳಿಂದಾಗಿ ಅವಳನ್ನು ಕತ್ತು ಹಿಚುಕಿ ಕೊಲ್ಲಬೇಕೆನಿಸಿತ್ತು. ‘ನನ್ನ ಮರೆತುಬಿಡು. ಇನ್ಯಾವತ್ತೂ ಕಾಲ್ ಮಾಡ್ಬೇಡ. ಮೆಸೇಜ್ ಮಾಡ್ಬೇಡ. ಪ್ಲೀಸ್ ನನ್ನ ಪಾಡಿಗೆ ನನ್ನ ಬಿಡ್ಬಿಡು’ ಎಂದು ಎಷ್ಟು ಸುಲಭವಾಗಿ ಹೇಳಿದಳು. ಅಳುವನ್ನು ನುಂಗಿಕೊಳ್ಳುವ ಶಕ್ತಿ ಗಂಡಸರಿಗಿದೆ. 'ಸರಿ. ಆದ್ರೆ ಕೊನೆಸಲ ‘ನಮ್ಮ ಹೋಟೆಲ್' ಗೆ ಹೋಗೋಣ. ನಮ್ಮ ಟೇಬಲ್ ನಲ್ಲಿ ಕೂತು ಮಸಾಲೆದೋಸೆ ತಿನ್ನೋಣ’ವೆಂದೆ.


‘ಇಲ್ಲ ನನಗೆ ಅಷ್ಟೆಲ್ಲ ಟೈಮಿಲ್ಲ ನಾನು ಹೊರಡ್ತೀನಿ' ಎಂದವಳು ‘ಆಟೋ’ ಅನ್ನುತ್ತಿದ್ದಂತೆ ಅವಳೆದುರಲ್ಲಿ ಆಟೋ ಪ್ರತ್ಯಕ್ಷವಾಯಿತು. ಆಟೋ ಹತ್ತಿ ಕುಳಿತ ನನ್ನ  ಪ್ರೇಮದೇವತೆ ‘ಸರಿ ನಾನಿನ್ ಹೊರಡ್ತೀನಿ’ ಎನ್ನುವುದನ್ನ ತಲೆಯಾಡಿಸಿ ಕಣ್ಣಲ್ಲೆ ಹೇಳಿದಳು. ನನಗದು ಅರ್ಥವಾಯಿತು. ನನಗೆ ಅರ್ಥವಾಗಿದ್ದು ಆಟೋ ಡ್ರೈವರ್ ಗೂ ಅದು ಹೇಗೆ ಅರ್ಥವಾಯಿತೋ! ಆಟೋ ಮುಂದೆ ಮುಂದಕ್ಕೆ ಹೋಯ್ತು. ಅವಳು ಆಟೋದಿಂದ ಕತ್ತು ಇಣಿಕಿಸಿ ನೋಡುತ್ತಾಳೆಂದು ನಂಬಿದ್ದೆ. ನನ್ನ ನಂಬಿಕೆ ಸುಳ್ಳಾಯಿತು. ಆಟೋ ಮುಂದೆ ಮುಂದೆ ಚಲಿಸಿದಂತೆಲ್ಲ ಯಾರೋ ನನ್ನಿಂದ ಅವಳನ್ನು ಕಿತ್ತುಕೊಳ್ಳುತ್ತಿದ್ದಾರೆ ಅಂತನಿಸಿತು. ಆಟೋ ಸಹ ಕಣ್ಮರೆಯಾಯಿತು. ಸದಾ ಗಿಜಿಬಿಜಿ ಎನ್ನುವ ರಸ್ತೆಯಲ್ಲಿ ಎಲ್ಲರನ್ನೂ ಕಳೆದುಕೊಂಡ ಅನಾಥ ಎಲ್ಲವನ್ನೂ ಕಳೆದುಕೊಂಡ ದರಿದ್ರ ನಾನೇ ಅನ್ನಿಸಿತು.


ನಾನು ಅಳಲಿಲ್ಲ. ಅಳುವನ್ನು ನುಂಗಿಕೊಳ್ಳುವ ಶಕ್ತಿ ಗಂಡಸರಿಗಿದೆ. ಅವಳೊಟ್ಟಿಗೆ ಸಿನಿಮಾ ನೋಡಿದ್ದ ಎಲ್ಲಾ ಚಿತ್ರಮಂದಿರಗಳ ಎದುರಿಗೆ ಸುತ್ತಾಡಿದೆ. ಕೈ ಕೈ ಹಿಡಿದು ಓಡಾಡಿದ ಆ ಬೀದಿಗಳಲ್ಲಿ ಅಲೆದಾಡಿದೆ. 'ನಮ್ಮ ಹೋಟೆಲ್' ಗೆ ಹೋದೆ. 'ನಮ್ಮ ಟೇಬಲ್' ಖಾಲಿಯೇ ಇತ್ತು. ಸರ್ವರ್ ಗೆ ಮಾಮೂಲಿನಂತೆ ಒಂದು ಮಸಾಲೆದೋಸೆ ಒಂದು ಕಾಫಿ ಕೊಡಲು ಹೇಳಿದೆ. ಸರ್ವರ್ ಹುಡುಗ ಮಸಾಲೆದೋಸೆಯ ಪ್ಲೇಟ್ ಟೇಬಲ್ ಗೆ ತಂದಿಡುವಷ್ಟರಲ್ಲಿ ‘ಕೊನೆಯ ಭೇಟಿ’ ಎಂಬ ಕವಿತೆಯೊಂದು ಬರೆದು ಮುಗಿಸಿದೆ.











ಕೊನೆಯ ಭೇಟಿ


ಬಹುಶಃ ಇದು ನಮ್ಮ

ಕೊನೆಯ ಭೇಟಿ

ಅದೇ ಮಾಮೂಲಿ ದರ್ಶಿನಿಯಲ್ಲಿ

ಒಂದೇ ಮಸಾಲೆ ದೋಸೆ

ಒಂದು ಕಪ್‌ ಕಾಫೀ

ಅರ್ಧರ್ಧ ತಿನ್ನೋಣ 

ಒನ್‌ ಬೈಟು ಕುಡಿಯೋಣ

ಇಷ್ಟು ದಿನಗಳ ನಮ್ಮ ಆಚರಣೆ

ಕೊನೆಯ ಭೇಟಿಯಲ್ಲಿ 

ಬದಲಾಗದಿರಲಿ


ಮನಸುಗಳು ಸತ್ತ

ದೇಹಗಳ ದೆವ್ವ ನಾವಿಂದು

ಅಂಟಿಕೊಂಡಿರುವ ಆತ್ಮಗಳ

ಹರಿದುಕೊಳ್ಳಬೇಕು


ಅಕಸ್ಮಾತ್‌

ನಾವು ಹಂಚಿಕೊಂಡ ಕನಸುಗಳು

ಕೈಹಿಡಿದು ಅತ್ತರೆ

ಬೆನ್ನಿಗೆರಡು ಬಾರಿಸಿ

ಕಿವುಡರಾಗೋಣ

ಮತ್ತೆ ಮನಸು ಕರಗಿ

ನಾವು ಒಂದಾದರೆ

ನಮ್ಮಿಬ್ಬರಿಗೇ ತೊಂದರೆ


ಹಿಂತಿರುಗಿ ನೋಡದೇ 

ಹೊರಟು ಬಿಡಬೇಕು

ಮನಸಿನ ಕದವ ಮುಚ್ಚಿಟ್ಟು

ನೆನಪುಗಳು ಒಳಗಡಿಯಿಟ್ಟರೆ ಕಷ್ಟ 

ನೋವುಗಳ ಬೀಜವದು


ಇಂದು ನಾವು ಕೂತೆದ್ದ ಜಾಗದಲ್ಲಿ

ನಾಳೆ ಹೊಸ ಪ್ರೇಮಿಗಳು

ಬಂದು ಕೂರಬಹುದು


- ನವೀನ್ ಮಧುಗಿರಿ 

14/12/2017