ಚಿಟ್ಟೆ ರೆಕ್ಕೆ


 











ಅರ್ಪಣೆ

ಹೂವಿನಂತಿದ್ದಳು ಹುಡುಗಿ
ಇದ್ದಕಿದ್ದಂತೆಯೇ
ರೆಕ್ಕೆಗಳ ಕಟ್ಟಿಕೊಂಡು
ಚಿಟ್ಟೆಯಾದಳು
ಹಾರಿಹೋದಳು

ಹಾರಿಹೋದ ಚಿಟ್ಟೆಗೆ




ಮುನ್ನುಡಿ

‘ಹೆಣ ಹೊತ್ತವರಿಗೆ ತಿಳಿಯಲಿಲ್ಲ , ಅವನು ಬದುಕಿಡೀ ಹೊತ್ತು ನಡೆದ ಭಾರ’, ‘ಅಪಘಾತ ಸಂಭವಿಸಿದೆ ಮಗುವಿನ ಕೈಯಲ್ಲಿದ್ದ ಆಟಿಕೆಗಳು ಚೆಲ್ಲಾಪಿಲ್ಲಿ,’ ‘ಜಗತ್ತಿನ ಯಾವ ಸೂಲಗಿತ್ತಿಗೂ ಗೊತ್ತಿಲ್ಲ , ಪ್ರೀತಿ ಹುಟ್ಟಿದ್ದು ಯಾವಾಗೆಂದು’ ಹೀಗೆ ಜಗತ್ತನ್ನು ವ್ಯಕ್ತಿ ನೆಲೆಯಲ್ಲಿ ನೋಡುತ್ತಲೇ ಸಮಷ್ಠಿಯ ದಾರಿಗೆ ತೆರೆದುಕೊಳ್ಳುವ ಹನಿಗವಿತೆಗಳು ನವೀನ್ ಮಧುಗಿರಿ ಯವರದ್ದು. ಕಾಣುವ ಸತ್ಯ ತನ್ನ ಅನುಭವದ ಸತ್ವದಿಂದ ಕಾಣಿಸುವ ಸತ್ಯವಾಗಿ ಅಭಿವ್ಯಕ್ತಿ ಕಾಣ್ಕೆಯಾಗುವ ಹೆಜ್ಜೆಗುರುತುಗಳನ್ನು ಮೂಡಿಸುವುದು ಪ್ರತೀ ಕವಿತೆಗಳ ದಿಕ್ಕುದಾರಿ. ಈ ದಾರಿಯಲ್ಲಿಯೇ ನವೀನ್ ಅವರ ಹನಿಗಳು ಅನೇಕ ಪ್ರಶ್ನೆ ಮತ್ತು ಪ್ರತಿಕ್ರಿಯೆಗಳ ಮೂಲಕ ವ್ಯವಸ್ಥೆಯನ್ನು ಮತ್ತು ವೈಯಕ್ತಿಕತೆಯನ್ನು ಪ್ರಶ್ನಿಸುತ್ತಾ ಕಾವ್ಯದ ಆವರಣದೊಳಗೆ ಹರಡಿಕೊಳ್ಳುತ್ತವೆ.  ನವೀನ್  ಅವರು ತಮ್ಮ ಹನಿಗಳಲ್ಲಿ ಉತ್ತಮ ತಾತ್ವಿಕ ಚರ್ಚೆಗಳನ್ನು ಎತ್ತಿಕೊಳ್ಳುತ್ತಾರೆ, ಆದರೆ ಅದನ್ನು ನಿಭಾಯಿಸುವಾಗ ಸ್ವಲ್ಪ ನಿಧಾನಿಸಬೇಕು ಅನ್ನಿಸುತ್ತದೆ. ಬದುಕಿನ ಬನಿ ಮತ್ತು ಅನುಭವ ಲೋಕ ಇಲ್ಲಿ ಪ್ರತೀ ಹನಿಗವಿತೆಗಳಲ್ಲೂ ಕಾಣುವುದರಿಂದ ಕವಿಗೆ ಕಾವ್ಯದ ದಾರಿ ದಕ್ಕಲಾರದ ಪ್ರಯಾಣವೇನಲ್ಲ. ಅರ್ಥಪೂರ್ಣ ಹನಿಗವಿತೆಗಳನ್ನು ಬರೆದು ಓದಿಸಲು ಸಿದ್ಧರಾಗುತ್ತಿರುವ ನವೀನ್ ಮಧುಗಿರಿಯವರಿಗೆ ಪ್ರೀತಿಯ ಶುಭಾಶಯಗಳು.

ಬೇಲೂರು ರಘುನಂದನ್
ಕವಿ, ರಂಗಕರ್ಮಿ
~~~



ನೀವು ಹನಿಗವನವೆನ್ನಿ, ಹನಿಗವಿತೆಯನ್ನಿ, ಕಿರುಗವಿತೆಯನ್ನಿ, ಚುಟುಕವೆನ್ನಿ ಅಥವಾ ಮತ್ತಿನ್ನೇನೋ ಅನ್ನಿ ಅದನ್ನು ಕೆಲವರು ಪ್ರಾಸಕ್ಕಷ್ಟೇ ಬರೆದರೆ, ಕೆಲವರು ಗಂಭೀರವಾಗಿ ಸಾಮಾಜಿಕ ಕಳಕಳಿಯಿಂದ ಬರೆಯುತ್ತಾರೆ. ಪ್ರಾಸಕ್ಕಾಗಿ ಬರೆದದ್ದೂ ಆ ಕ್ಷಣಕ್ಕಷ್ಟೇ ಖುಷಿ ನೀಡಿದರೆ, ಗಂಭೀರವಾಗಿ ಬರೆದದ್ದು ಓದುಗನನ್ನು ಕಾಡುವ ಗುಣ ಹೊಂದಿರುತ್ತದೆ. ಸಾಮಾಜಿಕ ಕಳಕಳಿಯಿಂದ ಬರೆಯುವಲ್ಲಿ ನನಗೆ ದಿನಕರ ದೇಸಾಯಿ, ಜರಗನಹಳ್ಳಿ ಶಿವಶಂಕರ್, ವೈಎನ್ಕೆ, ಸಿ.ಪಿ.ಕೆ, ಡುಂಡಿರಾಜ್, ಡಾ|| ಕೆ.ಬಿ.ರಂಗಸ್ವಾಮಿ, ಇನ್ನೂ ಮುಂತಾದವರೂ ಬಹಳ ಪ್ರಮುಖವಾಗಿ ಕಾಣುತ್ತಾರೆ. ಇವರ ಸಾಲಿಗೆ ನವೀನ್ ಮಧುಗಿರಿಯೂ ಸೇರಬಲ್ಲರು ಎಂಬ ಭರವಸೆ ಮೂಡಿಸುವ ಅನೇಕ ಹನಿಗವಿತೆಗಳು ಸಂಕಲನದಲ್ಲಿವೆ. ಈ ಕಾರಣಕ್ಕಾಗಿಯೇ ಇತ್ತೀಚಿಗೆ ಪ್ರಕಟವಾಗಿರುವ ಹಲವು ಹನಿಗವಿತೆ ಸಂಕಲನಗಳಲ್ಲಿ ಈ ಕೃತಿ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

ಈ ಸಂದರ್ಭದಲ್ಲಿ ನವೀನ್ರವರಿಗೆ ಶುಭಕೋರುತ್ತಾ, ಖ್ಯಾತ ಹನಿಗವಿ, ಹನಿಗವಿತೆಗಳ ಖಜಾನೆಯ ಒಡೆಯ ‘ಡುಂಡಿರಾಜ್’ ರೇ ಹಿಂದಿನ ಮತ್ತು ಇಂದಿನ ಕವಿಗಳನ್ನು ಕುರಿತು ಬರೆದಿರುವ

ಅವರು ಆಯುವ ಕವಿ
ಇವರು ಈಯುವ ಕವಿ

ಎಂಬ ಹನಿಗವಿತೆಯನ್ನು ನೆನೆಯುತ್ತಾ, ನವೀನ್ ಮಧುಗಿರಿ ಆಯುವ ಕವಿ ಎಂದು ಶ್ಲಾಘಿಸಬಹುದಾಗಿದೆ.

ಗುಬ್ಬಚ್ಚಿ ಸತೀಶ್
ಸಾಹಿತಿಗಳು, ಪ್ರಕಾಶಕರು
~~~


"ಬದುಕೆಂದರೆ ಏನು? ಈ ಜಗತ್ತಿನಲ್ಲಿ ಈವರೆಗೆ ಯಾರಿಗೂ ಸುಲಭದಲ್ಲಿ ಹೇಳಲಿಕ್ಕಾಗಿಲ್ಲ. ಬಹುಶಃ ಹೇಳುವುದಕ್ಕೂ ಸಾಧ್ಯವಿಲ್ಲವೇನೋ ಎಂದುಕೊಳ್ಳುವಾಗಲೇ ನವೀನ್ ಮಧುಗಿರಿ ಅವರ ಕೆಲವು ಕಿರುಗವಿತೆಗಳು ನನ್ನ ಓದಿಗೆ ಸಿಕ್ಕವು. ಒಂದೊಂದು ಕವಿತೆಯ ಓದೂ ಬದುಕಿನ ಒಂದೊಂದು ಅನುಭವವೇನೋ ಎನ್ನುವಂತೆ... ಉಫ್! ಬದುಕೆಂದರೆ ಇಷ್ಟೇ ಕಣೋ ಎಂದು ಆತ್ಮೀಯ ಸ್ನೇಹಿತನೊಬ್ಬನಿಗೆ ಹೇಳುವಂತೆಯೋ, ನಿರಾಶೆಯಿಂದ ತಲೆ ತಗ್ಗಿಸಿಕೊಂಡು ಎದುರು ನಿಂತ ಮಗುವಿಗೆ ಅಪ್ಪ ಧೈರ್ಯ ತುಂಬುವಂತೆಯೋ ಇಲ್ಲಿನ ಪ್ರತೀ ಕಿರುಗವಿತೆಗಳಿವೆ.ಬಲೂನು ಮಾರುವವನ ಉಸಿರಿನ ಬೆಲೆ ಎಷ್ಟು? ಅಪ್ಪನ ಜೇಬಿನಲ್ಲಿರುವ ಹಣದಷ್ಟು ಎಂದು ಸುಲಭದಲ್ಲಿ ಹೇಳಿಬಿಡಬಹುದು. ಆದರೆ ಅಪ್ಪನ ಹಣದಲ್ಲಿ ತನಗೆ ಸಿಕ್ಕ ಬಲೂನಿನೊಳಗಿರುವ ಬಲೂನು ಮಾರುವವನ ಉಸಿರಿನ ಬೆಲೆ ಏನು ಎನ್ನುವುದು ಬಲೂನು ಹಿಡಿದುಕೊಂಡ ಮಗುವಿಗೆ ಮಾತ್ರ ಗೊತ್ತಿರುತ್ತದೆ; ಅರ್ಥವಾಗುತ್ತದೆ ಎನ್ನುವಂತಹ ಸೂಕ್ಷ್ಮವನ್ನು ನವೀನ್ ಅವರು ಕಿರುಗವಿತೆಗಳಲ್ಲಿ ಹಿಡಿದಿಟ್ಟಿರುವ ರೀತಿಯೇ ಇವರ ಬರಹದ ಆಳವೇನು ಎನ್ನುವುದನ್ನು ತಿಳಿಸುತ್ತದೆ.

ಕೆ.ಗಣೇಶ ಕೋಡೂರು
ಸಂಪಾದಕರು, ’ನಿಮ್ಮೆಲ್ಲರ ಮಾನಸ’ ಮಾಸಪತ್ರಿಕೆ

******




ಬೆನ್ನುಡಿ

ಭರವಸೆ ಮೂಡಿಸಿರುವ ಕೆಲವೇ ಕೆಲವು ಯುವಕವಿಗಳಲ್ಲಿ ನವೀನ್ ಮಧುಗಿರಿ ಕೂಡ ಒಬ್ಬರು. ಇವರ ಕವಿತೆಗಳಲ್ಲಿನ ಸೂಕ್ಷ್ಮ ಒಳನೋಟಗಳು ಎಂಥವರಿಗೂ ಬೆರಗು ಮೂಡಿಸುತ್ತವೆ. ಮಕ್ಕಳ ಮುಗ್ಧತೆಯಿಂದ ಹಿಡಿದು ವೃದ್ಧರ ಅಸಹಾಯಕತೆವರೆಗೆ, ಪ್ರಕೃತಿಯ ಚೋದ್ಯಗಳಿಂದ ಹಿಡಿದು ಧಾರ್ಮಿಕ ಮೌಢ್ಯಗಳವರೆಗೆ, ಯುವಮನಸುಗಳ ಬಿಸಿಭಾವನೆಗಳಿಂದ ಹಿಡಿದು ಬದುಕಿನ ಕಟುವಾಸ್ತವದವರೆಗೆ ಇವರ ಕವಿತೆಗಳು ಅರಳಿಕೊಳ್ಳುತ್ತವೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಇವರೊಳಗಿನ ಸೃಜನಶೀಲ ಕವಿಯಿಂದ ಮತ್ತಷ್ಟು ಉತ್ತಮ ಕವಿತೆಗಳು ಕನ್ನಡಿಗರಿಗೆ ದಕ್ಕುವಂತಾಗಲಿ ಎಂದು ಹೃದಯದುಂಬಿ ಹಾರೈಸುತ್ತೇನೆ.

ಹೃದಯ ಶಿವ
ಕವಿ, ಚಿತ್ರ ಸಾಹಿತಿ, ಸಿನಿಮಾ ನಿರ್ದೇಶಕರು
~~~

ಇಲ್ಲಿರುವ ಎಲ್ಲ ಕವಿತೆಗಳು ರಸಪೂರ್ಣವಾಗಿವೆ. ಪ್ರತಿಯೊಂದು ಕವಿತೆ ಕೂಡ ಹಠಕ್ಕೆ ಬಿದ್ದು ಪದಭಂಡಾರದ ಆಗರವಾಗದೇ, ಆಯಾ ಚಿತ್ರಣಗಳು ತಾನೇತಾನಾಗಿ ಮುಂದೆ ಬಂದು ತಮ್ಮ ವಿಳಾಸ ಕೊಟ್ಟು ಹೋದಂತಿವೆ. ಹೀಗಾದಾಗಲೆಲ್ಲ ಕವಿ-ಕವಿತೆಗಿಂತ ಕವಿಮನ ಅತ್ಯಂತ ಶ್ರೇಷ್ಠದ್ದು ಅನ್ನುವ ನನ್ನ ವೈಯಕ್ತಿಕ ಅನಿಸಿಕೆ ಹೆಚ್ಚು ಪ್ರಬಲವಾಗುತ್ತ ಹೋಗುತ್ತದೆ. ನವೀನರಿಗೆ ನನ್ನ ಅಭಿನಂದನೆಗಳು.

ರಾಘವೇಂದ್ರ ಜೋಶಿ
ಹಾಯ್ಕು ಹಾಗೂ ಅಂಕಣ ಬರಹಗಾರರು
******



ಮೊದಲ ಓದು : ಪುಸ್ತಕ ವಿಮರ್ಶೆ

‘ಚಿಟ್ಟೆ ರೆಕ್ಕೆ’ ಕಿರುಗವಿತೆಗಳ ಸಂಕಲನ. ಹೂವಿಂದ ಹೂವಿಗೆ ಹಾರುವ ಚಿಟ್ಟೆ, ಕಾವ್ಯದ ಬೆರಗು, ಜೀವಂತಿಕೆ ಹಾಗೂ ಚಲನಶೀಲತೆಯನ್ನು ಸೂಚಿಸುವ ಅದ್ಬುತ ರೂಪಕವೂ ಹೌದು. ಈ ಚಿಟ್ಟೆ ರೂಪಕದ ಹುಡುಕಾಟದ ಹಂಬಲವನ್ನು ಸಂಕಲನದಲ್ಲಿ ಅಲ್ಲಲ್ಲಿ ಕಾಣಬಹುದು.

‘ಒಂದೇ ರಾತ್ರಿ/ ನೂರಾರು ಕಡಲು, ಕೊಳ, ನದಿ/ ಒಬ್ಬನೇ ಚಂದಿರ/ ಎಷ್ಟೊಂದು ಅಲೆಮಾರಿ’, ‘ಕೊಳದ ಧ್ಯಾನಾಭ್ಯಾಸ/ ಭಂಗಗೊಳಿಸುತ್ತಿವೆ/ ಕಪ್ಪೆ, ಗಾಳಿ, ತರಗೆಲೆ’ - ಮುದಗೊಳಿಸುವ ಇಂಥ ಸಾಲುಗಳು ಸಂಕಲನದಲ್ಲಿವೆ.

ಹೂವಿನಂತಿದ್ದಳು ಹುಡುಗಿ ರೆಕ್ಕೆಗಳ ಕಟ್ಟಿಕೊಂಡು, ಚಿಟ್ಟೆಯಾದಳು, ಹಾರಿಹೋದಳು ಎನ್ನುವ ಕವಿ, ತಮ್ಮ ಸಂಕಲನವನ್ನು ‘ಹಾರಿ ಹೋದ ಚಿಟ್ಟೆಗೆ’ ಅರ್ಪಿಸಿರುವುದು ಸೂಕ್ತವಾಗಿಯೇ ಇದೆ. ಇಲ್ಲಿನ ಕಿರುಗವಿತೆಗಳು, ಕಾಲುದಾರಿಯಿಂದ ಮುಖ್ಯರಸ್ತೆಗೆ ಬರುವ ಹಂಬಲದಲ್ಲಿ ಕವಿ ನಡೆಸಿರುವ ಮೋಹಕ ತಾಲೀಮಿನಂತಿವೆ.

ರಘುನಾಥ ಚ. ಹ.
12/02/2017
ಪ್ರಜಾವಾಣಿ ದಿನಪತ್ರಿಕೆ/ಸಾಹಿತ್ಯ/ಮೊದಲ ಓದು/ ಪುಸ್ತಕ ವಿಮರ್ಶೆ

******


 

ಕೃತಿಯ ವಿಮರ್ಶೆ


ಒಮ್ಮೊಮ್ಮೆ ಇದೆಲ್ಲ ಎಷ್ಟು ವಿಚಿತ್ರ ಅಂತನಿಸುತ್ತದೆ. ಕಚೇರಿಯಲ್ಲಿನ ಮುಂಗೋಪಿ ಬಾಸ್‌. ಆತನಿಗೆ ಎಲ್ಲಿಯದೋ ಒತ್ತಡ. ಅದನ್ನಾತ ಭರಿಸಲಾರ. ತಕ್ಷ ಣಕ್ಕೆ ಈ ಒತ್ತಡವನ್ನು ಮತ್ತೆಲ್ಲೋ ತಿರುಗಿಸಲಾಗದಿದ್ದರೆ ಆತನ ಹೃದಯಕ್ಕೇ ಅಪಾಯ. ಹೀಗಾಗಿ ಆತ ಯಾರದೋ ಮೇಲಿನ ಸಿಟ್ಟಿಗೆ ಇನ್ಯಾರ ಮೇಲೋ ರೇಗುತ್ತಾನೆ, ಹಾರಾಡುತ್ತಾನೆ. ಒಟ್ಟಿನಲ್ಲಿ ಇದೆಲ್ಲ ತೋರಿಕೆಯ ಜಗತ್ತು. ಆದರೆ ಆಂತರಿಕವಾಗಿ ಈ ಲೋಕ ಬಲು ಸೂಕ್ಷ್ಮದ್ದು. ಬೇಕಾದರೆ ಈ ಚೋದ್ಯವನ್ನು ಗಮನಿಸಿ. ಉರಿವ ಹಣತೆಗೆ ಗಾಳಿಯೇ ಉಸಿರು. ಅದು ವಿಜ್ಞಾನ. ಆದರೆ ಅದೇ ಗಾಳಿ ತುಸು ಜಾಸ್ತಿ ಬೀಸಿದರೂ ಹಣತೆ ಸೋತು ಸೊರಗುತ್ತದೆ. ಇಂಥದೊಂದು ಚೋದ್ಯವನ್ನು ಗಮನಿಸುವ ಕವಿ ಅದಕ್ಕೊಂದುಪ್ರೀತಿಯ ಲೇಪನ ಕೊಡುತ್ತಾನೆ.

ದೀಪವು ಆರುವ ಮುನ್ನ
ಗಾಳಿಗೆ ಹೇಳಿದ ಕೊನೆಯ ಮಾತು-
'ನಿನ್ನನ್ನೇ ಪ್ರೀತಿಸುವೆ'

ತುಂಬ ದಿನಗಳಿಂದ ಓದಬೇಕೆಂದರೂ ಓದಲಾಗದೆ ನನ್ನ ಟೇಬಲ್‌ ಮೇಲೆ ತನ್ನ ಅಸ್ತಿತ್ವ ಘೋಷಿಸಿಕೊಳ್ಳುತ್ತಿದ್ದ ಕವನ ಸಂಕಲನವೊಂದನ್ನು ನಿನ್ನೆ ಓದಿ ಮುಗಿಸಿದೆ. ಹೆಸರು: ಚಿಟ್ಟೆರೆಕ್ಕೆ (ವಿನಯ ಪ್ರಕಾಶನ) ಚುಟುಕ, ಹನಿಗವನಗಳ ಸ್ವರೂಪಕ್ಕೆ ಹೊಂದಿಕೊಳ್ಳುವ ಸಾಕಷ್ಟು ಕವಿತೆಗಳನ್ನು ಕವಿಮಿತ್ರರಾದ ನವೀನ್‌ ಮಧುಗಿರಿ 'ಚಿಟ್ಟೆರೆಕ್ಕೆ'ಯಲ್ಲಿ ಸಾದರಪಡಿಸಿದ್ದಾರೆ. ಎಲ್ಲ ಕವಿಗಳಂತೆ ನವೀನ್‌ ಕೂಡ ತಮ್ಮ ಕವಿತಾರಚನೆಯ ಆರಂಭಿಕ ಹಂತಗಳಲ್ಲಿ ಕಂಡಕಂಡದ್ದಕ್ಕೆಲ್ಲ ಕವಿತೆಯ ಸ್ವರೂಪ ನೀಡಿದವರು. ಪ್ರಾಸದ ಋುಣಕ್ಕೆ ಮಾರುಹೋದವರು. ಇಂಥ ಪ್ರಾಸಭರಿತ ತ್ರಾಸದಾಯಕದ ದಿನಗಳನ್ನು ಮೆಲುಕುಹಾಕುವಾಗಲೆಲ್ಲ ಊರಲ್ಲಿದ್ದ ಗೆಳೆಯನೊಬ್ಬ ಹಾಡುತ್ತಿದ್ದ ಕವಿತೆಯೊಂದು ನೆನಪಾಗುತ್ತದೆ. ನಾನೂ ನೀನೂ ಜೋಡಿ/ ಈ ಜೋಡಿ ಎತ್ತಿನ ಗಾಡಿ/ ಗಾಡಿಯೊಳಗೆ ಲೇಡಿ/ ಲೇಡಿ ಬಾಯೊಳಗೆ ಬೀಡಿ!- ಅಂತನ್ನುವ ಕವಿತೆಗಳನ್ನು ಹೊಟ್ಟೆ ಹುಣ್ಣಾಗುವಂತೆ ನಗುತ್ತ ಹಾಡುತ್ತಿದ್ದುದು ನೆನಪಾಗುತ್ತದೆ. ಆದರೆ 'ಚಿಟ್ಟೆರೆಕ್ಕೆ'ಯನ್ನು ಬರೆಯುವ ಹೊತ್ತಿನಲ್ಲಿ ನವೀನ್‌ರು ಈ ಪ್ರಾಸದ ಹಂಗನ್ನು ಮೀರಿದ್ದಾರೆ.ಅವರಿಗೆ ಈಗ ಕಣ್ಣಿಗೆ ಕಾಣಿಸಿದ ದೃಶ್ಯಗಳನ್ನೆಲ್ಲ ಕವಿತೆಯನ್ನಾಗಿಸಲು ಆಗದು ಅಂತನ್ನುವುದು ಗೊತ್ತಾಗಿದೆ. ಬದುಕಿನ ಸೂಕ್ಷ್ಮ ಗೊತ್ತಾಗಿದೆ. ಅಂತೆಯೇ ಅಂಥ ದೃಶ್ಯಗಳನ್ನೆಲ್ಲ 'ಕಾಣ್ಕೆ'ಯನ್ನಾಗಿಸುವ ತವಕದಲ್ಲಿದ್ದಾರೆ. ಹೀಗಾಗಿ, ಜೇಬು ಹಗುರಾದ ಮನುಷ್ಯ ಜಗತ್ತಿಗೆ ಬಲು ಭಾರ-ಅಂತೆಲ್ಲ ನಿಡುಸುಯ್ಯುವ ಇದೇ ಕವಿ ಸಾಮಾನ್ಯ ದೃಶ್ಯಗಳನ್ನೂ ಅಸಾಮಾನ್ಯಗೊಳಿಸುವ ಪರಿ ನೋಡಿರಿ:

ಬಲೂನು ಮಾರುವವನ ಉಸಿರನ್ನು
ಎಷ್ಟು ಜೋಪಾನ ಮಾಡುತ್ತಿದೆ
ಈ ಪುಟ್ಟಮಗು.

'ಅಪ್ಪ ಕನಸುಗಳ ಬೆಳೆವಾಗ ಅವ್ವ ಕಷ್ಟಗಳ ಕಳೆ ಕೀಳುತ್ತಿದ್ದಳು..' ಅಂತನ್ನುವ ರೂಪಕ ಹುಟ್ಟುಹಾಕುವ ಕವಿಗೆ ಇಂಥ ರೂಪಕಗಳ ಬಗ್ಗೆ ಪಿತ್ರಾರ್ಜಿತ ಹಕ್ಕಿದೆ. ಯಾಕೆಂದರೆ ನವೀನರು ಮೂಲತಃ ಕೃಷಿಕರು. ಬಾಲ್ಯದಿಂದಲೂ ಕೃಷಿ ಬದುಕಿನ ಕಷ್ಟಗಳನ್ನು ಅನುಭವಿಸಿದವರು. ಹೀಗಾಗಿ ಈ ಸಂಕಲನದಲ್ಲಿ ಒಂದಿಷ್ಟು ಆ ಹಿನ್ನೆಲೆಯೂ ಮೈದಾಳಿದೆ. ಆ ಹಿನ್ನೆಲೆಯಲ್ಲಿ ನಿಂತುಕೊಂಡು ನೋಡಿದಾಗ ತನ್ನದೇ ಕವಿತೆಯಲ್ಲಿ ಒಂದಿಷ್ಟು ಅಚ್ಚರಿ, ಒಂದಿಷ್ಟು ಕುತೂಹಲ ಹೀಗೆ ಸಾರ್ಥಕವಾಗಿ ಹೊಮ್ಮುತ್ತದೆ:

ಇದೇನಿದು?
ರಾಗಿಯ ಹೊಲವೋ ಬೆವರಿನ ಹೊಲವೋ
ಆವತ್ತು ಅಪ್ಪ ಬಿತ್ತಿದ್ದು ಬೆವರನ್ನೇ ತಾನೆ?

ಈ ಇಡೀ ಸಂಕಲನದಲ್ಲಿ ನನಗೆ ಮೂರು ರೀತಿಯ ಮನೋಭಾವಗಳು ಗೋಚರಿಸಿವೆ. ಮೂರ್ತ ಮತ್ತು ಅಮೂರ್ತ ವಿಷಯಗಳಲ್ಲಿ ಬಹುತೇಕ ಕವಿಗಳಿಗೆ ಇರುವ ಕುತೂಹಲ ಇಲ್ಲಿನ ಕವಿಗೂ ಇದ್ದಂತಿವೆ. ಮಿಕ್ಕಂತೆ, ಪ್ರೀತಿ/ಮನುಷ್ಯತ್ವ ನವೀನರ ಕವಿತೆಗಳಲ್ಲಿ ಹಾಸುಹೊಕ್ಕಾಗಿವೆ. ಅಂತೆಯೇ, ಪ್ರೀತಿ ಹುಟ್ಟಿದ್ದು ಯಾವಾಗೆಂದು ಜಗತ್ತಿನ ಯಾವ ಸೂಲಗಿತ್ತಿಗೂ ಗೊತ್ತಿಲ್ಲ ಅಂತ ಷರಾ ಹಾಕುವ ಕವಿ, ಪ್ರೀತಿಯನ್ನು ತಮ್ಮ ಅನಿಸಿಕೆಗಳಿಗೆ ಒಂದು ಪ್ರೋಬ್‌ (Probe) ಥರ ಬಳಸುತ್ತಾರೆ. ಪ್ರೀತಿಯನ್ನು ಎತ್ತಿ ಹಿಡಿಯುವ ಈ 'ಪ್ರೋಬ್‌' ಆಗೀಗ ಮತ್ತೆಮತ್ತೆ ರೀಸೈಕಲ್‌ ಆಗುತ್ತಲೇ ಇರುತ್ತದೆ. ಅವರದೇ ಮಾತಿನಲ್ಲಿ ಹೇಳುವದಾದರೆ, ರಾಧೆಯ ಉಸಿರಾಟದಲ್ಲಿ ಕೃಷ್ಣ ನದಿಯಾಗಿ ಹರಿದಂತೆ; ಮೋಡವಾಗಿ ಮರಳಿದಂತೆ!

ಒಂದೆಡೆ ಕವಿ ಹೇಳುತ್ತಾರೆ: ತೀರ ತಬ್ಬುವ ಕಡಲಿಗೆ ನೂರು ನದಿಗಳ ಪ್ರೋತ್ಸಾಹವಿರುತ್ತದಂತೆ. ನಾನು ಗಮನಿಸಿದ ಅದ್ಭುತ ಒಳನೋಟವಿದು. ಹಾಗಂತ ಕವಿ ಇಲ್ಲಿ ಬಂಡಾಯಗಾರನಲ್ಲ. ಹಲವಾರು ಕಡೆ ಈ ಪ್ರೋಬ್‌ ಅನ್ನುವುದು ಕವಿಗೆ ಒಂದು ಆಯುಧ ಕೂಡ ಹೌದು. ಹೀಗಾಗಿ, ಸಮಾಜದ ಹಲವಾರು ಮುಖಗಳ ಬಗ್ಗೆ ತಮ್ಮದೇ ಧಾಟಿಯಲ್ಲಿ ತಮ್ಮ ಪ್ರೀತಿಯ ರಾಧೆಯನ್ನೇ ಎದುರಿಗೆ ನಿಲ್ಲಿಸಿಕೊಂಡು ಕೇಳುತ್ತಾರೆ:

ನೋಡು ರಾಧೇ,
ಇಲ್ಲಿ ಭೂಮಿಯ ಮೇಲೆ ಎಷ್ಟೊಂದು ಜನರು
ಅನ್ನದ ಬದಲು ಧರ್ಮವನ್ನು ತಿನ್ನುವರು;
ಗಾಳಿಯ ಬದಲು ಜಾತಿಯನ್ನೇ ಉಸಿರಾಡುವರು

ಇಷ್ಟಕ್ಕೂ ಈ 'ಚಿಟ್ಟೆರೆಕ್ಕೆ'ಗಳಲ್ಲಿರುವುದು ಕಿರುಗವಿತೆಗಳು ಅನ್ನುತ್ತಾರೆ ಕವಿ. ಆದರೆ ಇಲ್ಲಿನ ಬಹುತೇಕ ಕವಿತೆಗಳು ಹಾಯ್ಕು ಪ್ರಾಕಾರಕ್ಕೆ ತೀರ ಸನಿಹದಲ್ಲಿವೆ. ಬಹುಶಃ ಹಾಯ್ಕು ಪ್ರಾಕಾರದಿಂದ ಪ್ರೇರಿತಗೊಂಡಿರುವ ನವೀನರು ಹಾಯ್ಕುವಿನ ಅಮೂರ್ತ ಭಾವಗಳನ್ನು ಸೆರೆ ಹಿಡಿದು ಅವನ್ನೆಲ್ಲ ಹಾಯ್ಕುವಿನ ಚೌಕಟ್ಟಿಗೆ ಹೊಂದಿಸಲಾಗದೇ ತಮ್ಮದೇ ಸಹಜ ಲಹರಿಯ ಕಿರುಗವಿತೆಗಳನ್ನಾಗಿಸಿದ್ದಾರೆ. ಅಂಥದೊಂದು ಪ್ರಯತ್ನ ನೋಡುವದಾದರೆ,

ವಸುಂಧರೆಯ ಚೆಲುವ
ಮೋಹಿಸಿದ ಚಂದಿರ
ಬೆಳದಿಂಗಳ ಸ್ಖಲಿಸಿಕೊಂಡ!

ಅದೇ ಧಾಟಿಯ ಮತ್ತೊಂದು ಪ್ರಯತ್ನ ಗಮನಿಸುವದಾದರೆ,

ಈ ನಿಶ್ಶಬ್ದ ರಾತ್ರಿಯಲಿ
ಕೊಳದ ಹಂಸ ಆರಿಸಿ ತಿನ್ನುತ್ತಿರುವುದು
ಆಗಸದ ಚುಕ್ಕಿಗಳನ್ನೇ ಇರಬೇಕು

ಇದನ್ನೆಲ್ಲ ಬರೆಯುವ ಈ ಹೊತ್ತಿನಲ್ಲಿ ಜಾಪಾನಿನ ಹಾಯ್ಕು ಮಾಸ್ಟರ್‌ ಬಾಶೋನ ಸುಪ್ರಸಿದ್ಧ The old pond ಹಾಯ್ಕು ನೆನಪಾಗುತ್ತಿದೆ. ಪುರಾತನವಾದ ಶಾಂತ ಹೊಂಡದಲ್ಲಿ ಕಪ್ಪೆಯೊಂದು ಜಿಗಿದು ಕಣ್ಮರೆಯಾಗುತ್ತದೆ ಅಷ್ಟೇ! ಬಾಶೋನ ಈ ಹಾಯ್ಕುವನ್ನು ಜಗತ್ತಿನಾದ್ಯಂತ ಬೇರೆ ಬೇರೆ ಭಾಷೆಯಲ್ಲಿ ತರ್ಜುಮೆ ಮಾಡಲಾಗಿದೆ. ಅಸಲಿಗೆ ಈ ಹಾಯ್ಕು ಮಾಸ್ಟರ್‌ ಏನು ಹೇಳಲು ಬಯಸಿದ್ದ ಅಂತ ವಿವರಿಸುವ ಹಲವಾರು ಸೆಮಿನಾರುಗಳು ನಡೆದಿದೆ. ನೂರಕ್ಕೂ ಹೆಚ್ಚು ತರ್ಜುಮೆಗಳನ್ನು ನಾನೇ ಓದಿದ್ದುಂಟು. 'ಚಿಟ್ಟೆರೆಕ್ಕೆ'ಯ ನವೀನ್‌ ಮಧುಗಿರಿಯವರಿಗೆ ಈ ಕಪ್ಪೆ ಮತ್ತು ಹೊಂಡಗಳು ಸಾಕಷ್ಟು ಕಾಡಿವೆ. ಅಂತೆಯೇ, ಅವರು ಬಾಶೋನ ಈ ನೋಟವನ್ನೂ ತಮ್ಮದೇ ಧಾಟಿಯಲ್ಲಿ ನಾಜೂಕಾಗಿ ಹೆಣೆದಿದ್ದಾರೆ.

ಇದೆಂಥ ಜಾದೂ!
ಕಪ್ಪೆಯ ಒಂದು ಜಿಗಿತ
ಮೌನದ ಕೊಳಕೆ ಮಾತು ಕಲಿಸಿತು.

ಹೀಗೆಲ್ಲ ಬರೆಯುವ ನವೀನ್‌ ಮಧುಗಿರಿಯವರು ಒಬ್ಬ ಪಳಗಿದ, ಪರಿಪೂರ್ಣ ಕವಿಯೆಂದು ಭಾವಿಸಲು ಕೊಂಚ ಹಿಂಜರಿಯುತ್ತೇನೆ. ಯಾಕೆಂದರೆ ಸಂಕಲನದ ಮುನ್ನುಡಿಯಲ್ಲಿ ಅವರೇ ಹೇಳಿಕೊಂಡಂತೆ ಅವರ ಚಲನೆಯ ಹಾದಿ ಇನ್ನೂ ದೂರವಿದೆ. ಈ ಹಾದಿಯಲ್ಲಿ ದೃಶ್ಯವೊಂದನ್ನು ಕಟ್ಟಿಕೊಡುತ್ತಿರುವಾಗ ಭಾಷೆ ಆಗೀಗ ವಾಚ್ಯವಾಗುವುದುಂಟು. ಪೇಲವವಾಗುವುದುಂಟು. ಇವೆಲ್ಲ ಯಾವುದೇ ಕವಿಯ ಹಾದಿಯಲ್ಲಿ ಉದ್ಭವಿಸಬಹುದಾದ ತಾತ್ಕಾಲಿಕ ಸಮಸ್ಯೆಗಳಾಗಿರುವದರಿಂದ ನವೀನರು ಇವನ್ನೆಲ್ಲ ಗಣನೆಗೆ ತೆಗೆದುಕೊಳ್ಳಬಹುದು ಅಂತ ನನ್ನಂಥವರ ಆಸೆ.

ಮಿಕ್ಕಂತೆ, ನಮ್ಮಲ್ಲಿ ಕವನ ಸಂಕಲನದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದೇ ಕಡಿಮೆ. ಅದರಲ್ಲೂ ಕೇವಲ ಹತ್ತನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿ ಜೀವನೋಪಾಯಕ್ಕಾಗಿ ಏನೇನೋ ಕೆಲಸ ಮಾಡಿ ಕೊನೆಗೆ ಕೃಷಿ ಚಟುವಟಿಕೆಯತ್ತ ಕೈಚಾಚಿರುವ ನವೀನ್‌ ಮಧುಗಿರಿಯವರಂಥ ಕವಿಗಳ ಬಗ್ಗೆ ಒಂಚೂರು ಮಾತನಾಡಬಹುದು ಅಂತನಿಸುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ, ಇಲ್ಲಿನ ಬಹುತೇಕ ಕವಿತೆಗಳು ಹಠಕ್ಕೆ ಬಿದ್ದು ಪದಭಂಡಾರದ ಆಗರವಾಗದೇ, ಆಯಾ ಚಿತ್ರಣಗಳು ತಾನೇತಾನಾಗಿ ಮುಂದೆಬಂದು ತಮ್ಮ ವಿಳಾಸ ಕೊಟ್ಟು ಹೋದಂತಿವೆ. ಹೀಗಾದಾಗಲೆಲ್ಲ ಕವಿ, ಕವಿತೆಗಳಿಗಿಂತ ಕವಿಮನ ಅತ್ಯಂತ ಶ್ರೇಷ್ಠವಾದದ್ದು ಅಂತನ್ನುವ ನನ್ನ ವೈಯಕ್ತಿಕ ಅನಿಸಿಕೆ ಹೆಚ್ಚು ಪ್ರಬಲವಾಗುತ್ತ ಹೋಗುತ್ತದೆ..


- ರಾಘವೇಂದ್ರ ಜೋಶಿ

ಮಾಯಾ ಲಾಂದ್ರ, ವಿಜಯ ಕರ್ನಾಟಕ ದಿನಪತ್ರಿಕೆ ಅಂಕಣ ಬರಹ
08 Nov 2017

******





ಕೃತಿಯಿಂದ ಕೆಲವು‌ ಕವಿತೆಗಳು


ಬಲೂನು ಮಾರುವವನ
ಉಸಿರನ್ನು
ಎಷ್ಟು ಜೋಪಾನ ಮಾಡುತ್ತಿದೆ
ಈ ಪುಟ್ಟಮಗು
*

ಅಬ್ಬಾ! ಈ ರೈತನೂ
ಕವಿತೆ ಬರೆಯಬಲ್ಲ
ಇವನು  ಗದ್ದೆಯಲ್ಲಿ ಹೂತ
ಸುಂದರ ಪದಗಳೀಗ
ಪೈರಿನ ನೆತ್ತಿಯ ಮೇಲೆ
ಭತ್ತದ ತೆನೆ
*

ಕೆರೆಯಲ್ಲಿ ನೀರು
ಬಿಸಿಯಾಗಿದೆ
ಈಗಷ್ಟೇ ನೇಸರ
ಜಳಕ ಮುಗಿಸಿ
ಹೋಗಿರಬಹುದು
*

ಚಂದಿರನ ಸ್ಪರ್ಶಿಸಲು ಮನುಷ್ಯ
ರಾಕೆಟ್, ತಂತ್ರಜ್ಞಾನವನ್ನೆಲ್ಲ ಬಳಸಿದ
ಅಂತರಿಕ್ಷ ಹಾರಿದ
ಕೊಳದ ದಡದಲ್ಲಿ ಕಪ್ಪೆ
ಸುಮ್ಮನೆ ಜಿಗಿಯಿತು ಒಮ್ಮೆ
*

ನನ್ನ ಬೆವರುಂಡ
ಭೂಮಿ
ಹಕ್ಕಿಗಳ ಹಾಡು ಕೇಳುತ್ತ
ಬಸುರಾದಳು
*

ಇದೇನಿದು?
ಇದು ರಾಗಿಯ ಹೊಲವೋ
ಬೆವರಿನ ಹೊಲವೋ
ಅವತ್ತು ಅಪ್ಪ ಬಿತ್ತಿದ್ದು
ಬೆವರನ್ನೇ ತಾನೇ!?
*

ಸದಾ ನಿಂತಲ್ಲೇ ನಿಂತಿದ್ದರು
ಪ್ರತಿದಿನ ಮನೆಯ
ಎಲ್ಲಾ ಸದಸ್ಯರ
ಮುಖದರ್ಶನವಾಗುತ್ತಿದೆ, ಕನ್ನಡಿಗೆ.
*

ಕೋಣವು ತಲೆಯಾಡಿಸಿದಾಗೆಲ್ಲ
ನೊಣಗಳು
ರೆಕ್ಕೆ ಬಡಿಯುತ್ತಿವೆ
*

ಎರಡು ತೀರಗಳು
ಕೈಹಿಡಿದು ನಡೆಸುತಿದೆ
ಹರಿವ ನದಿಯನ್ನು
ದೂರ ಕಡಲಿಗೆ
*

ಈ ಸಂಜೆಯಲಿ ನೇಸರ
ಕಡಲಿಗಿಳಿಯುತ್ತಿದ್ದಾನೆ
ಕವಿಗಳು ಹೀಗೆ ಹೇಳುತ್ತಿದ್ದಾರೆ.
ಆದರೆ ಮಧ್ಯಾಹ್ನವೇ
ನನ್ನ ಪಾದ ಸೋಕಿದ
ಅಲೆಗಳು ಬೆಚ್ಚಗಿದ್ದವು.
*

ಇದೆಂತಹ ಜಾದೂ!
ಕಪ್ಪೆಯ ಒಂದು ಜಿಗಿತ
ಮೌನದ ಕೊಳಕೆ
ಮಾತು ಕಲಿಸಿತು
*

ಬೇವಿನ ಕೊಂಬೆಯಲಿ
ಜೇನುಹುಳು
ಅದೇನು ಮಾಡುತ್ತಿದೆ?
ಹಲವು ಹೂಗಳಿಂದ
ಚೆಲುವ ತಂದು
ಕವಿತೆ ಕಟ್ಟುತ್ತಿದೆ!
*

ನನ್ನವಳು ಒಂದು ರೀತಿ
ಯಶೋದೆಯ ಹಾಗೆ
ಸಂಜೆ ಕೊಂಚ ತಡವಾಗಿ
ಮನೆಗೆ ಬಂದರೆ
ಎಲ್ಲಿ ‘ಆ’ ಅನ್ನು ಅಂತಾಳೆ!
*

ದೇಹವನ್ನು ಸೇರಿದಂತೆ
ಎಲ್ಲವನ್ನೂ ಹಂಚಿಕೊಳ್ಳುವ
ಗಂಡ ಹೆಂಡತಿ
ಬೆಳಗಾದರೆ ಹಲ್ಲುಜ್ಜುವುದು
ಬೇರೆ ಬೇರೆ
ಟೂತ್ ಬ್ರಷ್ಷಿನಲ್ಲಿ
*

‘ನೀನು ನನ್ನ ಉಸಿರು’
ಎಂದು ಹುಡುಗ
ತನ್ನ ಹುಡುಗಿಗೆ
ಪ್ರೇಮಪತ್ರ ಬರೆದದ್ದು
ಯಾವುದೋ ಒಂದು ಮರದ
ಆತ್ಮದ ಮೇಲೆ
*

ಅಜ್ಜ ಸತ್ತಾಗ ಅಳದಿರುವ ಮಗು
ಬಲೂನು ಉಸಿರು ಬಿಟ್ಟಾಗ
ರಚ್ಚೆ ಹಿಡಿದಿದೆ
ಕಣ್ತುಂಬಿಕೊಂಡಿದೆ
*

ರೈತನ ಹೊಲದಲ್ಲಿ
ಬೆಳೆದ ಹೂವಿನ
ಮಕರಂದ ಹೀರುವ
ಜೇನುಹುಳುಗಳು
ಸುಂಕ ಕಟ್ಟುವುದಿಲ್ಲ
*

ಹರಿಯುವ ನದಿಗಳ ನೋಡಿ
ಸಂಭ್ರಮಿಸಬೇಡ
ನದಿಗಳ ಬಂಧಿಸಲು
ಮುಂದೊಂದು ಕಡಲಿದೆ
ಭೂಮಿಯ ಮೇಲೆ
ಯಾವುದೂ ಸ್ವತಂತ್ರವಲ್ಲ
*

ಬಲೂನು ತುಟಿಗಿಟ್ಟು
ತಂದೆ ಉಸಿರೂದುವಾಗ
ಮಗು ಉಸಿರು ಬಿಗಿಹಿಡಿದು
ಕ್ಷಣ ಕ್ಷಣಕೂ ಊದುತ್ತಿರುವ
ಬಲೂನನ್ನೇ ನೋಡುತ್ತಿದೆ
ಒಂದು ಬಲೂನು ದುಂಡಾಗಲು
ಇಬ್ಬರ ಉಸಿರು ಬೇಕು!
*

ಹೊತ್ತು ಮುಳುಗಲಿದೆ ಸಂಜೆ
ಇಬ್ಬರು ಸಮಾನ ವಯಸ್ಸಿನ
ಗೆಳೆಯರು
ವಾಕಿಂಗ್ ಹೊರಟಿದ್ದಾರೆ
ಅಜ್ಜನ ಅಂಗೈಯಲ್ಲಿ
ಮೊಮ್ಮಗನ ಕೈ
*

ಹಸಿರು ಚಿಗುರು ಹೂವಿನ
ಕಂಪುಗಳ ನಡುವೆ
ಕುಹು ಕುಹೂ ದನಿಯಿದೆ
ಮಾವಿನಮರದ ಚೆಲುವ
ಕೋಗಿಲೆ ಹೊಗಳುತಿರಬಹುದೇ?!

******