ಇಂತಿ ನಿನ್ನ ಪ್ರೀತಿಯ

 



ನವೀ...

ದಯವಿಟ್ಟು ಕ್ಷಮಿಸು, ನಿನ್ನೊಂದಿಗೆ ಎಷ್ಟೊಂದು ಕನಸುಗಳನ್ನು ಕಂಡಿದ್ದೆ. ನೀನೂ ಸಹ ನನ್ನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದೆ. ಆದರೆ ನಮ್ಮ ಮನೆಯವರನ್ನೆಲ್ಲಾ ಎದುರಿಸಿ ನಿನ್ನೊಂದಿಗೆ ಬಂದು ಬದುಕುವಷ್ಟು ಧೈರ್ಯ ನನಗಿಲ್ಲ. ನನಗೆ ನನ್ನ ಮಾವನ ಮಗನ ಜೊತೆ ಮದುವೆ ನಿಶ್ಚಯವಾಗಿದೆ. ಮನೆಯಲ್ಲಿ ನಮ್ಮಿಬ್ಬರ ವಿಷಯ ಗೊತ್ತಾಗಿಯೇ ದಿಢೀರನೆ ಅಣ್ಣ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಖಂಡಿತ ನಿನಗೆ ಒಳ್ಳೇ ಮನಸಿನ ಹುಡುಗಿ ಸಿಗ್ತಾಳೆ. ಅವಳನ್ನು ನನಗಿಂತಲೂ ಹೆಚ್ಚಾಗಿ ಪ್ರೀತಿಸು...

ನನಗೆ ಹುಟ್ಟುವ ಮೊದಲ ಮಗುವಿಗೆ ನಿನ್ನ ಹೆಸರೇ ಇಡುವೆ. ನಾನೇನೂ ನಿನಗೆ ಮೋಸ ಮಾಡಿಲ್ಲ. ಎಲ್ಲಿದ್ದರೂ ನಿನ್ನನ್ನ, ನಿನ್ನ ಪ್ರೀತಿಯನ್ನ ಮರೆಯುವುದಿಲ್ಲ. ಮುಂಜಾನೆ ಕನಸಿಗೆ ಬಂದು ನೀ ಕೊಟ್ಟ ಮುತ್ತು .. ಒಂದು ಸುಂದರ ಮುಸ್ಸಂಜೆ ನಾವು ಕೈಹಿಡಿದು ನಡೆಯುತ್ತಾ ಬೇಕೆಂದೇ ಸೋನೆ ಮಳೆಯಲ್ಲಿ ಮಿಂದದ್ದು.. ಪಾರ್ಕಿನ ಸಿಮೆಂಟ್ ಬೆಂಚಿನ ಮೇಲೆ ಅಂಟಿ ಕುಳಿತು, ಭವಿಷ್ಯದ ಕನಸುಗಳನ್ನ ಹಂಚಿಕೊಂಡದ್ದು.. ನಿನ್ನೊಂದಿಗೆ ಮುನಿಸಿಕೊಂಡದ್ದು, ಮಾತು ಬಿಟ್ಟದ್ದು.. ಚಾಲೆಂಜ್ ನಲ್ಲಿ ಸೋತು ನಿನ್ನಿಂದ ಪಡೆದ ನೂರೊಂದು ಮುತ್ತು.. ಬೆಳದಿಂಗಳ ರಾತ್ರಿ ನನ್ನನ್ನು ನೀ ಚಂದಿರನಿಗೆ ಹೋಲಿಸಿದ್ದು.. ಇನ್ನೂ ತುಂಬಾ ಇವೆ.

ಅವೆಲ್ಲವೂ ನನ್ನೊಳಗೆ ಮಳೆಗಾಲದ ಹಸಿರಿನಂತೆ, ಮೈಮೇಲಿನ ಹಚ್ಚೆಯಂತೆ ಸದಾ ನೆನಪಾಗಿ ಉಳಿದಿರುತ್ತವೆ, ನನ್ನ ಕೊನೆಯುಸಿರಿರುವವರೆಗೂ...

ನಾನು ನಿನಗೆ ಕೈ ಕೊಟ್ಟೆ, ಮೋಸ ಮಾಡಿಬಿಟ್ಟೆ ಅಂತೆಲ್ಲಾ ಅಂದುಕೊಂಡು ನನ್ನನ್ನು ಮರೆಯಲು ಕುಡಿಯುತ್ತೇನೆಂದು ನೆಪ ಹೇಳಿಕೊಂಡು ಕುಡಿಯುವುದನ್ನು ಕಲಿತು ಹಾಳಾಗಬೇಡ. ಜೀವನದಲ್ಲಿ ಏನನ್ನಾದರೂ ಸಾಧಿಸು. ದೊಡ್ಡ ಗುರಿಯೊಂದನ್ನು ಸೇರುವ ಕೆಲಸ ಮಾಡು. ಜಗದ ಯಾವುದೇ ಮೂಲೆಯಲ್ಲಿದ್ದರೂ ನಿನ್ನ ಗೆಲುವನ್ನು ಕಂಡು ಸಂಭ್ರಮಿಸುತ್ತೇನೆ. ಮತ್ತು ಯಾವಾಗಲೂ ನೀನು ಹೇಳುತ್ತಿದ್ದೆಯಲ್ಲ, ‘ನೀನೆಂದರೆ ಬರೀ ನೀನಲ್ಲ ನಾನು’ ಎಂದು, ನಿನ್ನ ಮಾತು ನಿಜ. ಅದಕ್ಕೆ ನೀ ನನ್ನ ಪ್ರೀತಿಸುವುದಕ್ಕಿಂತಲೂ ಹೆಚ್ಚು ಹೆಚ್ಚು ನಾ ನಿನ್ನ ಪ್ರೀತಿಸುತ್ತೇನೆ. ಕೊನೆಯ ಬಾರಿ ನಿನ್ನನ್ನು ತಬ್ಬಿಕೊಂಡು ಒಂದೆರಡು ಹನಿ ಕಣ್ಣೀರು ಸುರಿಸಬೇಕೆನಿಸುತ್ತಿದೆ.
                               
ನಿನ್ನ 
ಆಶೂ..
          
                    
                                  
                          ***

ಇದು ನನ್ನ ಆರು ವರ್ಷಗಳ ಹಿಂದಿನ ಕನಸು, ನೆನಪು, ನೋವು, ಕಣ್ಣೀರು, ಒಂದು ರೀತಿ ಪ್ರೀತಿಯ ಪಳೆಯುಳಿಕೆ. ಅವಳು ನನ್ನನ್ನು ಪ್ರೀತಿಸಿದ್ದಳೆಂಬುದಕ್ಕೆ ಇರುವಂತಹ ಕುರುಹು. ನನ್ನ ಹೃದಯದ ನೋವು ಏನೆಂದರೂ ಸರಿಯೇ. ಈ ಆರು ವರ್ಷಗಳಲ್ಲಿ ಅದು ಎಷ್ಟು ಬಾರಿ ಈ ಕಾಗದವನ್ನು ಹೀಗೆ ಕೈಯಲ್ಲಿ ಹಿಡಿದು ಕುಳಿತು ಕಣ್ಣೀರು ಸುರಿಸಿದ್ದೆನೋ? ಅವಳ ನೆನಪೆ ಹಾಗೆ.. ಮಲೆನಾಡಿನ ಮಳೆಯಂತೆ ಹಿಡಿದುಕೊಂಡರೆ ಬಿಡುವುದೇ ಇಲ್ಲ. ಸುರಿಯುತ್ತಲೇ ಇರುತ್ತದೆ ಒಂದೇ ಸಮನೇ...

ಅವಳು ಈ ಕಾಗದವನ್ನು ನನ್ನ ಕೈಗಿಟ್ಟು ಹೋದ ಕ್ಷಣ ಈಗಲೂ ನನ್ನ ಕಣ್ಮುಂದೆಯೇ ಇದೆ. ಕಲರ್ ಟಿವಿಯಲ್ಲಿ ಕಂಡ ಕಪ್ಪು ಬಿಳುಪು ಸಿನಿಮಾದಂತೆ.

ನಮ್ಮಿಬ್ಬರ ಪೈನಲ್ ಇಯರ್ ಡಿಗ್ರಿಯ ಕೊನೇ ಸೆಮಿಸ್ಟರ್ ನ ಎಕ್ಸಾಮ್ ಮುಗಿದು ಒಂದು ವಾರವಷ್ಟೇ ಆಗಿತ್ತು. ಅದೊಂದು ದಿನ ಇದ್ದಕ್ಕಿದ್ದಂತೆ ಅವಳ ಮೊಬೈಲ್ ಸ್ವಿಚ್ ಆಫ್. ವಿಚಾರಿಸೋಣವೆಂದು ಅವಳ ಮನೆಯ ಬಾಗಿಲಿಗೆ ಹೋದರೆ ಬಾಗಿಲಲ್ಲಿನ ಬೀಗ ನನ್ನನ್ನು ಗುರಾಯಿಸಿತು. ಅಕ್ಕಪಕ್ಕದ ಮನೆಯಲ್ಲಿ ವಿಚಾರಿಸಿದರೆ ಊರಿಗೆ ಹೋಗಿದ್ದಾರೆಂದು ಉತ್ತರಿಸಿದರು. ಹೀಗೆ ಅವಳನ್ನು ನೋಡದೆ ಅವಳೊಂದಿಗೆ ಮಾತಾಡದೆ ಒಂದು ವಾರ ಕಳೆಯಿತು. ಆ ಒಂದು ವಾರ ನಾನೆಷ್ಟು ಒದ್ದಾಡಿದೆನೆಂದರೆ, ನೀರಿನಿಂದ ಹೊರಬಿದ್ದ ಮೀನು, ಕಟುಕನ ಕೈಗೆ ಸಿಕ್ಕ ಕುರಿ, ಬೇಡನ ಕೈಯಲ್ಲಿ ನರಳುವ ಪಾರಿವಾಳ ಒದ್ದಾಡುತ್ತವಲ್ಲ ಆ ರೀತಿಯ ಹಿಂಸೆ ಮನಸಿನಲ್ಲಿ ಅನುಭವಿಸಿದೆ.

ಪ್ರತಿದಿನ ಅವಳ ನಂಬರ್ ಗೆ ನೂರು, ನೂರೈವತ್ತು ಸಲ ಕರೆ ಮಾಡುತ್ತಿದ್ದೆ. ಆಗೆಲ್ಲಾ ಕಂಪನಿಯ ಆಯಮ್ಮನದು ಒಂದೇ ರೆಡಿಮೇಡ್ ಉತ್ತರ - ಕ್ಷಮಿಸಿ ನೀವು ಕರೆ ಮಾಡುತ್ತಿರುವ ಫೋನ್ ಸಧ್ಯದಲ್ಲಿ ಸ್ವಿಚ್ ಆಫ್ ಆಗಿದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಕರೆ ಮಾಡಿರಿ. ಐವತ್ತು ಬಾರಿ ಮೆಸೇಜ್ ಕಲಿಸುತ್ತಿದ್ದೆ. ಯಾವೊಂದು ಡೆಲಿವರಿಯಾಗದೆ ನನ್ನ ಮೊಬೈಲ್ ನಲ್ಲಿಯೇ ಉಳಿದು ಹೋದವು. ಊಟ, ನಿದಿರೆ, ನೀರು ಏನೊಂದೂ ಬೇಡವೆನಿಸೋದು. ಅವಳು ಜೊತೆಗಿಲ್ಲದ ಈ ಜಗತ್ತು ಖಾಲಿ ಖಾಲಿಯೆನಿಸೋದು.

ಅದೊಂದು ದಿನ ಬೆಳ್ಳಂಬೆಳಗ್ಗೆ ನನ್ನ ಮೊಬೈಲ್ ಗೆ ಅನಾಮಿಕ ನಂಬರ್ ನಿಂದ ಕರೆ ಬಂತು. ಕುತೂಹಲದಿಂದ ಕಾಲ್ ರಿಸೀವ್ ಮಾಡಿದರೆ ಅತ್ತಲಿಂದ ಅವಳದೇ ಧ್ವನಿ! ಅವಳ ಧ್ವನಿ ಕೇಳಿ ಮರಳುಗಾಡಿನಲ್ಲಿ ಎಳನೀರು ಕುಡಿದಂತಾಯ್ತು. ಅವಳು ಹೇಳಿದಂತೆ ಹೇಳಿದ ಸಮಯಕ್ಕೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಹಿಂದಿನ ಪಾರ್ಕಿಗೆ ಹೋದೆ.

ಅವಳು ನನಗಿಂತಲೂ ಮೊದಲೇ ಬಂದು ನಿಂತು ನನಗಾಗಿ ಕಾಯುತ್ತಿದ್ದಳು. ಅಂದೇಕೋ ಅವಳ ತಾಜಾ ತಾಜಾ ಮುಖ ಬಾಡಿದ ಹೂವಿನಂತಾಗಿತ್ತು. ನನ್ನ ನೋಡುತ್ತಿದ್ದಂತೆಯೇ ಅವಳ ಕಣ್ಣುಗಳು ಹನಿಯತೊಡಗಿದವು. ಸುತ್ತಮುತ್ತ ಅಷ್ಟೊಂದು ಜನರಿದ್ದರೂ ನಿಂತಲ್ಲೇ ನನ್ನನ್ನು ತಬ್ಬಿ ಜೋರಾಗಿ ಅಳಲಾರಂಭಿಸಿದಳು. ನನಗಂತೂ ಏನು ಮಾಡಲೂ ತೋಚದೆ ಸುಮ್ಮನೇ ನಿಂತಿದ್ದೆ. ಅವಳೇಕೆ ಹೀಗೆ ಸುಮ್ಮನೇ ಕಣ್ಣೀರು ಸುರಿಸುತ್ತಿದ್ದಾಳೆಂದು ಗೊತ್ತಾಗುತ್ತಿಲ್ಲ.

ಸತತ ಅರ್ಧಗಂಟೆ ಅತ್ತು ಕಣ್ಣೀರೆಲ್ಲಾ ಖಾಲಿಯಾದ ಮೇಲೆ ಕೊನೆಯೆಂಬಂತೆ ನನ್ನ ಕೆನ್ನೆಗೊಂದು ಮುತ್ತಿಟ್ಟು, ಕೈಗೊಂದು ಲಗ್ನಪತ್ರಿಕೆ ಕೊಟ್ಟು ಏನೊಂದೂ ಮಾತನಾಡದೆ ಅಲ್ಲಿಂದ ನಡೆದುಬಿಟ್ಟಳು. ನಾನು ನಿಂತಲ್ಲೇ ಲಗ್ನಪತ್ರಿಕೆಯನ್ನು ಬಿಡಿಸಿ ನೋಡಿದೆ, ಅದು ಅವಳದೇ ಮದುವೆಯದು. ಅದರ ಜೊತೆಗೆ ಅದರೊಳಗೆ ಅವಳು ನನಗೆಂದೇ ಬರೆದ ಪತ್ರವೊಂದಿತ್ತು.

ಆ ಪತ್ರವನ್ನು ಓದಿ ಮುಗಿಸುವ ವೇಳೆಗೆ ಕಾಕತಾಳೀಯವೋ ಅಥವಾ ದೇವರ ಕರುಣೆಯೋ- ಸಿನಿಮಾಗಳಲ್ಲಿ ನಾಯಕ ಅಳುವಾಗೆಲ್ಲಾ ಮಳೆ ಸುರಿಯುವಂತೆ ನನ್ನ ಕಥೆಯಲ್ಲಿಯೂ ಹಾಗೆಯೇ ಆಯಿತು. ಇದ್ದಕ್ಕಿದ್ದಂತೆ ಮಳೆ ಶುರುವಾಯಿತು. ಬೀಳುವ ಹನಿಗಳಿಗೆ ಮೈಯೊಡ್ಡಿ ಸುಮ್ಮನೇ ಕುಳಿತುಬಿಟ್ಟೆ. ಒಳಗೆ ಬೇಯುತ್ತಿದ್ದ ಹೃದಯವನ್ನು ಮಳೆ ಹನಿಗಳ ಮುಂದೆ ತೆರೆದಿಡಬೇಕೆನಿಸಿತು.

ಸಂಜೆಯವರೆಗೂ ಸುರಿದ ಮಳೆ ನಿಂತಿತು. ಆದರೆ ನನ್ನ ಕಣ್ಣೀರು ನಿಲ್ಲುವ ಯಾವ ಸೂಚನೆಯೂ ಕಾಣಲಿಲ್ಲ.
              

                                 ***

ಜನವರಿ 31, 2013 ರಲ್ಲಿ ‘ವಿಜಯ next’ ಪತ್ರಿಕೆಯಲ್ಲಿ ಪ್ರಕಟಿತ ಕತೆ. ನನ್ನ ಮೊದಲ ಪ್ರಕಟಿತ ಕತೆ.

ಈಗಲೂ ಅಂತಹದ್ದೇ ಸಂಜೆ. ಹೊರಗೆ ಮಳೆಯಾಗುತ್ತಿದೆ. ಮುಗಿಲು ಆಳುತ್ತಿರುವ ಸೂಚನೆ. ಅದೇಕೋ ಗೊತ್ತಿಲ್ಲ ನಾನು ಅಳುವಾಗೆಲ್ಲ ಮುಗಿಲು ನನ್ನೊಂದಿಗೆ ಕಣ್ಣೀರಿಡುತ್ತದೆ! ಕೈಯಲ್ಲಿ ಹಿಡಿದಿದ್ದ ಪತ್ರವನ್ನು ಟೇಬಲ್ ಮೇಲಿಟ್ಟು ಕಿಟಕಿಯ ಬಳಿ ಬಂದು ನಿಂತರೆ ಸರಳಿನ ಹೊರಗೆ ಕಾಣುವುದೆಲ್ಲಾ ಬರೀ ಮುಗಿಲಿನ ಕಣ್ಣೀರು. ನನ್ನ ಕಣ್ಣಲ್ಲೂ.....

ಅವಳು ನನ್ನಿಂದ ದೂರಾದ ಮೇಲೆ ನನ್ನ ಬದುಕಿನಲ್ಲಿ ಏನೆಲ್ಲಾ ನಡೆಯಿತು. ಎಷ್ಟೆಲ್ಲಾ ಬದಲಾದವು. ಆದರೆ ಅಂದಿಗೂ ಇಂದಿಗೂ ಬದಲಾಗದೆಯೇ ಹಾಗೇ ಇರುವುದೆಂದರೆ ಅವಳ ನೆನಪು, ನನ್ನ ಕಣ್ಣೀರು ಮತ್ತು ನನ್ನೊಂದಿಗೆ ಅಳುವ ಈ ಮುಗಿಲು!!

ಕಿಟಕಿಯಾಚೆಗೆ ಮಳೆ ನಿಂತಿತ್ತು. ಗೇಟಿನ ಬಲ ಬದಿಗಿರುವ ಹೂವಿನ ಗಿಡವೊಂದು ಚಳಿಯಿಂದ ನಡುಗುತ್ತಿತ್ತು. ಪ್ರತಿಬಾರಿಯೂ ಹೀಗೆಯೇ ಆಗುತ್ತದೆ. ಒಟ್ಟಿಗೆ ಶುರುವಾಗಿ ಮೊದಲು ನಿಲ್ಲುವುದು ಮಳೆಯೇ! ಅವಳ ನೆನಪು, ನನ್ನ ಕಣ್ಣೀರು ನಿರಂತರ ...

ನನ್ನ ಮನದ ಮಾತುಗಳನ್ನ ಅವಳಿಗೆ ತಲುಪಿಸಬೇಕು. ಅದಕ್ಕೆ ಸುಮ್ಮನೇ ನನ್ನ ಸಮಾಧಾನಕ್ಕೆ ಅವಳಿಗೊಂದು ಪತ್ರವನ್ನು ಬರೆಯುತ್ತಾ ಕುಳಿತೆ.

            
                             ***


ಪ್ರೀತಿಯ ಗೊಣ್ಣೆಪುರ್ಕಿ...

ದಯವಿಟ್ಟು ಕ್ಷಮಿಸು ನಿನ್ನ ಮದುವೆಗೆ ಬರಲಾಗಲಿಲ್ಲ. ನನ್ನವಳಾಗಬೇಕಾದ ನೀನು ನೇಣು ಹಗ್ಗದಂತಹ ತಾಳಿಗೆ ಮತ್ತೊಬ್ಬನೆದುರು ತಲೆ ಬಾಗುವುದನ್ನು ನೋಡಿದರೆ ನನ್ನ ಕಣ್ಣುಗಳು ಕುರುಡಾಗುತ್ತಿದ್ದವು. ಅಥವಾ ಕಣ್ಣಲ್ಲಿನ ನಿನ್ನ ಬಿಂಬ ಕರಗುತ್ತಿತ್ತು. ಅದಕ್ಕೆ ಬೇಕೆಂದೇ ಬರಲಿಲ್ಲ. ನಿನ್ನ ಮದುವೆಗೆ ಬರದೇ ಇದ್ದುದಕ್ಕೆ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ!

ನಿಜವಾಗಿಯೂ ನೀನು ಹೇಳಿದಂತೆಯೇ ನನಗೆ ತುಂಬಾ ಒಳ್ಳೆಯ ಹುಡುಗಿಯೇ ಸಿಕ್ಕಿದ್ದಾಳೆ. ಅವಳನ್ನು ನಿನಗಿಂತಲೂ ಹೆಚ್ಚಾಗಿ ಪ್ರೀತಿಸುವೆ! ಅಷ್ಟೇ ಅಲ್ಲ ಅವಳೂ ಸಹ ನೀನು ಪ್ರೀತಿಸುವುದಕ್ಕಿಂತಲೂ ಹೆಚ್ಚು ನನ್ನನ್ನು ಪ್ರೀತಿಸುತ್ತಾಳೆ. ನಿನ್ನಾಸೆಯಂತೆ ನಾನಿಂದು ಸಾಧಿಸಿದ್ದೇನೆ. ದೊಡ್ಡ ಗುರಿಯೊಂದನ್ನು ತಲುಪಿದ್ದೇನೆ. ನಿನಗೆ ಖುಷೀನಾ?

ಮನೆಯಲ್ಲಿ ಈಗಷ್ಟೇ ನನ್ನ ಪುಟ್ಟ ಮಗುವಿನ ಕಿಲಕಿಲ ನಗು ಚೆಲ್ಲುತ್ತಿದೆ. ಅವಳೂ ಸಹ ನಿನ್ನಂತೆ ಪುಟ್ಟ ದೇವತೆ ಕಣೆ. ಅವಳಿಗೂ ನಿನ್ನ ಹೆಸರೇ ಇಟ್ಟಿರುವೆ. ಅಷ್ಟು ಮಾತ್ರವಲ್ಲ, ಅವಳಿಗೂ ಆಗಾಗ ನೆಗಡಿಯಾಗುತ್ತೆ! ಇದೇ ಹೆಸರು ಯಾಕೆಂದು ನನ್ನವಳು ಕೇಳಿದ್ದಕ್ಕೆ ನನ್ನ ನಿನ್ನ ಕತೆಯನ್ನೆಲ್ಲಾ ಹೇಳಿದೆ. ಕಥೆ ಕೇಳಿ ಅತ್ತುಬಿಟ್ಟಳು. ಜೊತೆಗೆ ಆ ಹುಡುಗಿಗೆ ನನ್ನದೊಂದು ಥ್ಯಾಂಕ್ಸ್ ಎಂದಳು. ಯಾಕೆಂದು ಕೇಳಿದ್ದಕ್ಕೆ, ನಿನ್ನಂತ ಒಳ್ಳೇ ಹೃದಯದವನನ್ನು ನನಗೆ ಕೊಟ್ಟಿದ್ದಕ್ಕೆ ಅಂದಳು.
ಆಗಾಗ ನೀನು ತುಂಬಾ ನೆನಪಾಗಿ ಕಾಡುತ್ತೀಯಾ, ಆಗಲೇ ನನ್ನೆದೆಯಲ್ಲಿ ನನ್ನವಳ ಮೇಲಿನ ಪ್ರೀತಿ ಹೆಚ್ಚುವುದು... ಇಷ್ಟು ವರ್ಷಗಳಲ್ಲಿ ಒಮ್ಮೆಯೂ ನಿನ್ನನ್ನು ಮರೆತಿಲ್ಲ. ನಿನ್ನೊಂದಿಗೆ ಕಳೆದ ಕ್ಷಣಗಳು, ಆಡಿದ ಮಾತುಗಳು,  ಪಡೆದ ಮುತ್ತು, ಕ್ಷಮೆ ಕೇಳುವಂತೆ ಮಾಡಿದ ಮುನಿಸು. ನೀನು ಮಳೆಯೆಂದರೆ ಇಷ್ಟವೆಂದು ನೆನೆದು ನಿನಗೆ ನೆಗಡಿಯಾದಾಗ ‘ಗೊಣ್ಣೆಪುರ್ಕಿ’ಯೆಂದು ನಾ ನಿನಗೆ ಅಡ್ಡೆಸರು ಇಟ್ಟಿದ್ದು! ಯಾವುದನ್ನೂ ನಾನು ಮರೆಯುವುದಿಲ್ಲ. ನಿನ್ನ ನೆನಪು ನನ್ನನ್ನು ಬಿಡುವುದಿಲ್ಲ ...

ಇಲ್ಲಿ ಈಗಷ್ಟೇ ಮಳೆ ಬಂದು ನಿಂತಿದೆ. ಅಲ್ಲಿಯೂ ಮಳೆ ಬಂದಿದೆಯಾ? ನಿನಗೆ ಮಳೆಯೆಂದರೆ ಇಷ್ಟವೆಂದು ನೆನೆಯಬೇಡ. ಆಮೇಲೆ ನಿನಗಲ್ಲಿ ನೆಗಡಿಯಾದರೆ ನನಗಿಲ್ಲಿ ಜ್ವರ ಬರುತ್ತದೆ! ಮಳೆಯೆಂದರೆ ನಿನಗೆ ತುಂಬಾ ಇಷ್ಟ. ಮಳೆ ಬಂದಾಗ ನಿನಗೆ ಖುಷಿಯಾಗುತ್ತೆ. ಆದರೆ ನನಗೆ ನಿನ್ನ ನೆನಪು ಕಣ್ಣೀರಾಗಿ ಹನಿಯುತ್ತದೆ...

ಕ್ಷಮಿಸು ಇನ್ನೂ ಹೆಚ್ಚು ಬರೆಯಲಾಗುವುದಿಲ್ಲ. ನನ್ನ ಕಣ್ಣೀರು ನಿಲ್ಲುತ್ತಿಲ್ಲ.. ನಿನ್ನ ನೆನಪಿನಂತೆ....
                             


                             ಇಂತಿ
                             ನಿನ್ನ ಪ್ರೀತಿಯ
                                ನವೀ..
                      
                             ***

ಈ ಕಥೆಯನ್ನು ಓದಿದವರಲ್ಲಿ ನೀನೂ ಒಬ್ಬಳಾಗಿದ್ದರೆ ಗೊಣ್ಣೆಪುರ್ಕಿ ಈಗಲೂ ನಿನಗೆ ಐ ಲವ್ ಯೂ...!
******

ನವೀನ್ ಮಧುಗಿರಿ