ನಿನ್ನ ಬಿಟ್ಟಿರುವ ಶಿಕ್ಷೆ

ಇತ್ತೀಚೆಗೆ ನಮ್ಮ ಬಂಧುಗಳ ಮನೆಯಲ್ಲೊಂದು ಮದುವೆ ಸಮಾರಂಭವಿತ್ತು. ಈ ಸಮಯದಲ್ಲಿ ಮಗಳನ್ನು ಕರೆದುಕೊಂಡು ಹೋಗುವುದು ಸೂಕ್ತವಲ್ಲ ಅನಿಸಿದ್ದರಿಂದ ಎರಡು ದಿನಗಳ ಮುಂಚಿತವಾಗಿ ನನ್ನವಳನ್ನು ಬಂಧುಗಳ ಮನೆಗೆ ಬಿಟ್ಟುಬಂದು, ನಾನು ಮಗಳೊಂದಿಗೆ ಮನೆಯಲ್ಲಿಯೇ ಉಳಿದೆ. ಆ ಸಮಯದಲ್ಲಿ ನನ್ನ ದಿನಚರಿ ಪುಸ್ತಕದಲ್ಲಿ ಬರೆದ ಈ ಕವಿತೆಯ ಕುರಿತು ಹೆಚ್ಚೇನು ಹೇಳಬೇಕಿಲ್ಲ ಅನಿಸುತ್ತಿದೆ. ಈ ಕವಿತೆಯೇ ಇಲ್ಲಿ ಎಲ್ಲವನ್ನು ಹೇಳುವುದೆಂಬ ನಂಬಿಕೆ ನನಗೆ!
***















ನಿನ್ನ ಬಿಟ್ಟಿರುವ ಶಿಕ್ಷೆ

ಬಿಸಿಯಾದ ಹಾಲಿನ ಬಟ್ಟಲು
ಇಕ್ಕಳ ಮರೆತ
ಕೈ ಸುಟ್ಟಿತು,
ಫಿಲ್ಟರಿನಲ್ಲಿ
ಬರಿದಾದ ಡಿಕಾಕ್ಷನ್ನು

ಮನೆ ಪೂರ ಚೆಲ್ಲಾಪಿಲ್ಲಿಯಾದ
ಮಗಳ ಪುಸ್ತಕ, ಪೆನ್ಸಿಲು, ಆಟಿಕೆಗಳು
ಹುಡುಕಿದ ನಂತರವೇ ಸಿಕ್ಕಿದ್ದು
ತ್ರಿಬಲ್ ಫೈವ್ ಮಂಕಿ ಬ್ರಾಂಡು
ಪೊರಕೆಯಾಡಿಸುತ್ತಾ ಆಡಿಸುತ್ತ
ನನ್ನ ಪುರಾತನ ಪ್ರೇಮದ
ನೆನಪುಗಳನೆಲ್ಲ ಗುಡಿಸಿದಂತೆ ಭಾಸವಾಗಿ
ಮನೆ, ಮನವೆಲ್ಲ ಸ್ವಚ್ಛವಾಯಿತು

ಪಾತ್ರೆ ತುಂಬಿಸಿಕೊಂಡ ಸಿಂಕು
ಸಬೀನಾ, ನಾರು
ಅಣಕಿಸುತ್ತಿರಬಹುದಾ!
‘ಎಲ್ಲಿ ನಿನ್ನವಳು?’

ಅಮ್ಮನೇ ಬೇಕೆಂದು
ಹಟ ಮಾಡದಿದ್ದರೂ
ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ
ಕ್ರೀಮು ಪೌಡರ್ ಹಚ್ಚಿ
ತಲೆ ಬಾಚುವಾಗ
ಮಗಳು ನೆನಪಿಸಿಕೊಂಡಳು
‘ಅಮ್ಮ ಇದ್ದಿದ್ದರೆ..!’

ತಿಂಡಿಗೆ ನನಗಿಂತದ್ದೇ ಮಾಡು
ನನಗದೇ ಬೇಕೆಂದು
ಮಗಳು ಆಜ್ಞಾಪಿಸುವಾಗ
ನನ್ನಲ್ಲೊಂದು ಪ್ರಶ್ನೆ
‘ನೀನೇನು ಜೀತದಾಳ?’

ಮಧ್ಯಾಹ್ನ ಮತ್ತದೇ
ಬೇಯಿಸು, ತಿನ್ನು.
ದೂರವಾಣಿಯಲ್ಲಿ
ನೀನೇ ಹೇಳಿದ ಪಾಕವಿಧಾನ
ಆದರೂ ಬಡಿಸುವ ನಿನ್ನ
ಕೈಗಳಲ್ಲೇ ರುಚಿಯಿತ್ತಾ?!

ಸಂಜೆ ಕುರುಕಲು ತಿಂಡಿ ಮೆಲ್ಲುತ್ತಾ
ಟಿವಿ ನೋಡುವಾಗ
ಮಗಳಿಗೂ ನನಗು
ಒಟ್ಟಿಗೇ ಬಿಕ್ಕಳಿಕೆ
‘ನೀನು ನೆನೆದೆಯಾ?’

ರಾತ್ರಿಯ ಊಟಕ್ಕೆ
ತಿಳಿಸಾರು, ಅನ್ನ, ಹಪ್ಪಳ
ಮೊಸರು ಮಜ್ಜಿಗೆಯಿಲ್ಲದ
ಊಟ ರುಚಿಸಲಿಲ್ಲ
ಎನ್ನುವುದು ನೆಪಕ್ಕೆ ಮಾತ್ರ,
ಬಡಿಸಲು ನೀನಿಲ್ಲ

ಬಹಳ ಹೊತ್ತಿನವರೆಗೆ ಟಿವಿ ನೋಡಿ
ಹಾಸಿಗೆಗೆ ಮೈ ಚೆಲ್ಲಿದರೆ
ಕರೆದಷ್ಟು ದೂರ ಓಡುವುದು ನಿದ್ದೆ
ಒಂಟಿ ತಲೆದಿಂಬಿನ ಮಂಚದಲ್ಲಿ
ತೋಳಿನ ಮೇಲೆ ತಲೆಯಿಲ್ಲ

ಬಂಧು ಬಳಗದಲ್ಲಿ
ಮದುವೆ, ನಾಮಕರಣ, ಗೃಹ ಪ್ರವೇಶ
ನಿನ್ನ ತವರು ಮನೆಯಲ್ಲಿ
ಹಬ್ಬ ಹರಿದಿನ
ಇವುಗಳು ಬರುವುದೇ ನಮ್ಮನ್ನು
ವಿರಹದಲ್ಲಿ ಕೊಲ್ಲುವುದಕ್ಕಾ?

ಸಮಾರಂಭಗಳಲ್ಲಿ ನಿನಗೆ
ರೇಷಿಮೆ ಸೀರೆ, ಆಭರಣ
ಅಲಂಕಾರದ ಸಂಭ್ರಮ
ಅಪರೂಪಕ್ಕೆ ಸಿಗುವ ಬಳಗದ ಜೊತೆ
ಅದೇ ಅದೇ ಮಾತುಕತೆ
ನಾನಿಲ್ಲಿ ಮನೆಯಲ್ಲಿ
ಮಗಳ ಜೊತೆಗಿದ್ದರೂ
ಮನಸೇಕೆ ನಿನ್ನ ಸೆರಗು ಹಿಡಿದಿದೆ!

ನೀನಿಲ್ಲದ ಮನೆಯಲ್ಲಿ
ಕ್ಯಾಲೆಂಡರಿನಲ್ಲಿ ಬದಲಾಗದು ದಿನಾಂಕ
ಗಡಿಯಾರದ ಮುಳ್ಳು ನಿಧಾನ
ನೀನಿಲ್ಲದ ಮನೆಯಲ್ಲಿ
ಎಲ್ಲವು ಖಾಲಿಯೆನಿಸಿದರು
ಮನಸು ತುಂಬುವುದು!
ನಿನ್ನ ಬಿಟ್ಟಿರುವುದೇನು ಕಷ್ಟವಲ್ಲ
ನಿನ್ನ ಬಿಟ್ಟಿರುವುದು ಕಷ್ಟವೇ ಅಲ್ಲ
ನಿನ್ನ ಬಿಟ್ಟಿರುವುದು ಶಿಕ್ಷೆ ನನಗೆ,
ಅನುಭವಿಸುತ್ತಿರುವೆ.
***

- ನವೀನ್ ಮಧುಗಿರಿ

02/09/2020

(‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯಲ್ಲಿ ‘ಕವಿತೆಗಳ ದಿನಚರಿ’ ಕಾಲಂನಲ್ಲಿ ಪ್ರಕಟಿತ.)