ಬೆಕ್ಕು ಎನ್ನುವ ಭಾವಜೀವಿಯ ಪ್ರಸಂಗ

ಚಿತ್ರಕೃಪೆ: ಅಂತರ್ಜಾಲ



ಮನೆಯಲ್ಲಿ ದೇಕುವ ಮಗು

ಮನೆಯ ಸಾಕು ಬೆಕ್ಕನ್ನು 

ಹಿಂಬಾಲಿಸುತ್ತಿದೆ



ಇದೊಂದು ಹಾಯ್ಕು. ನೀವು ಗಮನಿಸಿರಬಹುದು. ಮನೆಯಲ್ಲಿ ಸಾಕು ಬೆಕ್ಕೊಂದು ಇದ್ದರೆ ಅದು ನಿಧಾನವಾಗಿ ಹೆಜ್ಜೆಗಳನ್ನಿಡುತ್ತಾ ಪತ್ತೆದಾರಿಯಂತೆಯೋ ಇಲ್ಲವೇ ಮನೆಯ ಜವಾಬ್ದಾರಿಯುತ ಕಾವಲುಗಾರನಂತೆಯೋ ಒಳ ಹೊರಗೆಲ್ಲ ಓಡಾಡುತ್ತಿರುತ್ತೆ. ಅಂತಹ ಮನೆಯಲ್ಲಿ ದೇಕುವ ಮಗುವಿದ್ದರಂತೂ ಬೆಕ್ಕಿನ ಬಾಲ ಹಿಡಿಯಲೋ ಅಥವಾ ಕಳ್ಳಹೆಜ್ಜೆಯ ಮಾರ್ಜಾಲದ ಮೇಲಿನ ಕುತೂಹಲದಿಂದಲೋ ಮಗು ದೇಕುತ್ತಲೇ ಬೆಕ್ಕನ್ನು ಹಿಂಬಾಲಿಸುತ್ತದೆ. ಹೀಗೆ ದೇಕುತ್ತ ಬೆಕ್ಕನ್ನು ಹಿಂಬಾಲಿಸುವ ಮಗುವನ್ನೊಮ್ಮೆ ನೋಡಿದ್ದೆ. ಆ ಸಂದರ್ಭದಲ್ಲೇ ಮೇಲಿನ ಹಾಯ್ಕುವನ್ನು ರಚಿಸಿದ್ದು. 



ಒಮ್ಮೆ ನನ್ನ ಗೆಳತಿ ಕೇಳಿದ್ದಳು. “ನಿನ್ನಿಷ್ಟದ ಪ್ರಾಣಿ ಯಾವುದು?” ನಾನು ತಮಾಷೆಯಾಗಿ “ನೀನೇ” ಎಂದಿದ್ದೆ. ತನ್ನನ್ನು ಪ್ರಾಣಿ ಎಂದಿದ್ದಕ್ಕೆ ಮುನಿಯಬಹುದೆಂದುಕೊಂಡೆ. “ಮನುಷ್ಯನು ಸಹ ಒಂದು ಪ್ರಾಣಿಯೇ ಅಲ್ಲವೇ. ಮಾತು ಬರುವ, ಯೋಚನಾ ಶಕ್ತಿಗಳಿರುವ ಪ್ರಾಣಿ” ಎಂದು ಹೇಳುವುದರೊಂದಿಗೆ ನನ್ನ ತಪ್ಪನ್ನು ತಿದ್ದಿಕೊಳ್ಳಲು ಯತ್ನಿಸಿದೆ. ಸದ್ಯ ನನ್ನ ಉತ್ತರವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸದ ಆಕೆ ಕೋಪಗೊಳ್ಳಲಿಲ್ಲ. ಮತ್ತೆ  ನಾನೂ ಸಹ ಇದೇ ಪ್ರಶ್ನೆಯನ್ನು ಅವಳ ಮುಂದಿಟ್ಟೆ. ನನ್ನಂತೆ ಅವಳು ತರಲೆಯಾಗಲೀ ಗೇಲಿಯಾಗಲೀ ಮಾಡಲಿಲ್ಲ. “ನಿನ್ನಿಷ್ಟದ ಪ್ರಾಣಿ ಯಾವುದು?” ಎಂಬ ನನ್ನ ಪ್ರಶ್ನೆಗೆ “ಬೆಕ್ಕು ನನ್ನಿಷ್ಟದ ಪ್ರಾಣಿ” ಎಂದಳು. ಆಕೆಯ ಉತ್ತರವನ್ನು ಕೇಳಿದವನಿಗೆ ಅಚ್ಚರಿಯಾಗಿದ್ದು ಸುಳ್ಳಲ್ಲ. “ಎಲ್ಲರೂ ಬೆಕ್ಕನ್ನು ಅಪಶಕುನ ಎನ್ನುತ್ತಾರೆ. ಆದರೆ ನೀನೇನು ಅಂತಹ ಬೆಕ್ಕನ್ನೇ ಮೆಚ್ಚಿಕೊಂಡೆ!” ಎಂಬ ನನ್ನ ಅಚ್ಚರಿಗೆ ಅವಳು ಹೀಗೆ ಉತ್ತರಿಸಿದಳು. “ಯಾಕಂದ್ರೆ ಬೆಕ್ಕು ತುಂಬಾ ನೀಟಾಗಿರುತ್ತೆ. ತನ್ನ ದೇಹವನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುತ್ತೆ. ಅದು ತುಂಬಾ ಅಚ್ಚುಕಟ್ಟಾದ ಪ್ರಾಣಿ.” ಅವಳ ಮಾತಿನಲ್ಲಿ ಬೆಕ್ಕಿನ ಕುರಿತು ಮತ್ತಷ್ಟು ಮೆಚ್ಚುಗೆಯಿತ್ತು. 



ಪಾಶ್ಚಾತ್ಯ ಲೇಖಕರಾದ ಮಾರ್ಕ್ ಟ್ವೈನ್ ಸಹ ಬೆಕ್ಕಿನ ಕುರಿತು ಹೀಗೆ ಹೇಳಿದ್ದಾರೆ. “ಬೆಕ್ಕುಗಳು ತುಂಬಾ ಕ್ಲೀನ್. ಅಷ್ಟೇ ಕನ್ನಿಂಗ್ ಮತ್ತು ಅಷ್ಟೇ ಚಾಣಾಕ್ಷ. ಹಾಗಾಗಿ ಬೆಕ್ಕನ್ನು ಮುದ್ದಿಸುತ್ತೇನೆ.” ಅಮೇರಿಕದ ಖ್ಯಾತ ಲೇಖಕ ಅರ್ನೆಸ್ಟ್ ಹೆಮ್ಮಿಂಗ್ವೇ ಬೆಕ್ಕಿನ ಬಗ್ಗೆ ಹೇಳಿರುವುದು ಹೀಗೆ. “ಬೆಕ್ಕು ಭಾವಜೀವಿ ಮತ್ತು ಪ್ರಾಮಾಣಿಕ. ಮನುಷ್ಯ ನಮ್ಮಿಂದ ಕೆಲವು ಸಂಗತಿಗಳನ್ನು ಮುಚ್ಚಿಡಬಹುದು. ಅದರೆ ಬೆಕ್ಕು ಹಾಗೆ ಮಾಡುವುದಿಲ್ಲ.”  



ಬೆಕ್ಕುಗಳ ಜೊತೆಗಿನ ನಮ್ಮ ಕನ್ನಡ ಸಾಹಿತಿಗಳ ಒಡನಾಟವನ್ನು ನಾನೆಲ್ಲಿಯೂ ಕೇಳಿಲ್ಲ. ಮತ್ತೆಲ್ಲೂ ಓದಿದ ನೆನಪಿಲ್ಲ. ಆದರೆ ಸಾಹಿತ್ಯದಲ್ಲಿ ಮಾತ್ರ ಆಗಾಗ ಬೆಕ್ಕು ಬಂದು ಹೋಗಿದೆ. ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಂಬ ಪದ್ಯದಿಂದ ಶುರುವಾಗಿ ಎರಡು ಬೆಕ್ಕು ಮತ್ತು ಕೋತಿ, ಸಿಂಹ ಮತ್ತು ಬೆಕ್ಕು, ತೆನಾಲಿರಾಮನ ಬೆಕ್ಕು.. ಹೀಗೆ ಕೆಲವಾರು ಕತೆ ಮತ್ತು ಪದ್ಯಗಳಲ್ಲಂತೂ ಬೆಕ್ಕು ಸ್ಥಾನವನ್ನು ಪಡೆದಿದೆ. ಬೆಕ್ಕಿನ ಕುರಿತು ಇರುವ ಕತೆಗಳೆಲ್ಲವು ನೀತಿಕತೆಗಳೇ ಆಗಿವೆ. ಎರಡು ಬೆಕ್ಕು ಮತ್ತು ಕೋತಿಯ ಕತೆಯಲ್ಲಿ ಇಬ್ಬರ ಜಗಳದಿಂದ ಮೂರನೆಯವನಿಗೆ ಲಾಭವಾಗುತ್ತದೆ. ಸಿಂಹ ಮತ್ತು ಬೆಕ್ಕಿನ ಕತೆಯಲ್ಲಿ ತನ್ನ ಸಾಮರ್ಥ್ಯವನ್ನು ಅರಿಯದೇ ಜಂಭದಿಂದ ಬೆಕ್ಕು ಅವನತಿ ಹೊಂದುತ್ತದೆ. ಬಿಸಿ ಹಾಲಿನಿಂದ ನಾಲಗೆ ಸುಟ್ಟುಕೊಂಡ ಬೆಕ್ಕು ಹಾಲಿನ ಬಟ್ಟಲನ್ನು ಕಂಡರೆ ಸಾಕು ಹೆದರಿ ಓಡುವ ತೆನಾಲಿರಾಮನ ಕತೆಯಲ್ಲಿ ಮಾತ್ರ ಹಾಸ್ಯವಿದೆ. 



ಮೊನ್ನೆ  ಪುಸ್ತಕವೊಂದನ್ನು ಮಗಳ ಕೈಗಿಟ್ಟು ಪ್ರಾಣಿಗಳ ಚಿತ್ರಗಳನ್ನು ತೋರಿಸುತ್ತಾ ಅವುಗಳ ಹೆಸರು ಮತ್ತು ಪರಿಚಯ ಹೇಳಿಕೊಡುತ್ತಿದ್ದೆ. ಸಿಂಹವನ್ನು ಅವಳೇ ಗುರುತಿಸಿದಳು. “ಇದು ಗೊಗ್ಗಾ ಅಪ್ಪಾ ಮುತ್ಬೇದ ಕಚ್ತೈತೆ” ಎಂದು ನನ್ನನ್ನು ಹೆದರಿಸಿದಳು! ಜಿರಾಫೆಯನ್ನು ಕಂಡು “ಇಜ್ಯಾಕಪ್ಪಾ ಕತ್ಚು ಇಂಗ್ ಇಂಗ್ ಇಕ್ಕಂದೈತೆ” ಎಂದು ಕುತೂಹಲದಿಂದ ಕೇಳಿದಳು. ಹುಲಿ, ಚಿರತೆ, ನರಿ ಇತ್ಯಾದಿ ಕಾಡು ಪ್ರಾಣಿಗಳ ಕುರಿತು ಕುತೂಹಲದಿಂದ ಕೇಳಿದಳು. ನಾಯಿಯನ್ನು ನೋಡಿ “ಅಪ್ಪಾ ಇದು ನಾಯಿಪಾಪಾ. ಇದ್ಜು ಪಚ್ಚಿ, ಅನ್ನ, ಚಿತ್ತಾನ ಎಯ್ಯಾ ತಿಂಚೇತೆ” ಎಂದು ನನಗೇ ನಾಯಿಯನ್ನು ಪರಿಚಯಿಸಿಕೊಟ್ಟಳು. ಹಸುವಿನ ಚಿತ್ರವನ್ನು ಕಂಡು “ಇದು ನಮ್ ಅಚಾಪಾಪಾ. ಉಯ್ಯು ತಿಂಚೇತೆ. ಜಿಯ್ಯಾ ಕುದ್ಜಿತೇತೆ. ನಮ್ಗ್ ಉಗ್ಗಾ ಕೊಚ್ಚೇಯ್ತೆ” ಎಂದಳು. ಆದರೆ ಬೆಕ್ಕನ್ನು ನೋಡಿದವಳೇ “ಅಪ್ಪಾ ಇದು ಕಲ್ಲ ಮಿಯ್ಯಾ ಇದು ಕಲ್ಲ ಮಿಯ್ಯಾ. ಇದು ಉಗ್ಗಾ ಕುದ್ಜಿತೇತೆ. ಆಂತಿಅಜ್ಜಿ ಮನೇಗ್ ಉಗ್ಗಾ ಕುದ್ಜೋಗಿಚ್ಚು.” ಎಂದು ಬೆಕ್ಕಿಗೆ “ಕಳ್ಳ ಬೆಕ್ಕೆಂಬ” ಸರ್ಟಿಫಿಕೇಟ್ ಕೊಟ್ಟೇಬಿಟ್ಟಳು.



ಸಾಕು ಪ್ರಾಣಿಗಳಲ್ಲಿ ಬೆಕ್ಕು ಮಾತ್ರವೇ ಕಳ್ಳನೆಂಬ ಹೆಸರು ಪಡೆದಿದೆ. ಕಥೆಗಳಲ್ಲಿಯೂ ಸಹ ಅನೇಕ ಲೇಖಕರು ಬೆಕ್ಕನ್ನು ಕಳ್ಳನಂತೆಯೇ ಚಿತ್ರಿಸಿದ್ದಾರೆ. ಬೆಕ್ಕು ಸಹ ಹಾಗೆಯೇ ಕಿಟಕಿ ತೂರಿ ಅಡುಗೆಮನೆಗೆ ಹಾರಿ ಬಟ್ಟಲಿನ ಹಾಲನ್ನು ಬರಿದು ಮಾಡುತ್ತದೆ. ಅದಕ್ಕೆ ಜನ ಯಾರಾದರೂ ತಪ್ಪು ಮಾಡಿ ಸಿಕ್ಕಿಬಿದ್ದಾಗ “ಬೆಕ್ಕು ಕಣ್ಣುಮುಚ್ಚಿ ಹಾಲುಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲ ಅಂದುಕೊಂಡಿದೆ” ಎಂದು ಬೆಕ್ಕನ್ನೇ ಉದಾಹರಣೆ ಕೊಡುತ್ತಾರೆ. 



ಹಾಗಾದರೆ ಬೆಕ್ಕು ಬರೀ ಹಾಲನ್ನಷ್ಟೇ ಕುಡಿಯುವುದೇ? ಇಲ್ಲ, ಬೆಕ್ಕು ಮಾಂಸಹಾರಿ ಪ್ರಾಣಿ. ಇಲಿ, ಕೀಟ, ಪಕ್ಷಿ, ಮೀನು ಇವುಗಳನ್ನೆಲ್ಲ ತಿನ್ನಬಲ್ಲದು. ಆದರೆ ಬೆಕ್ಕಿಗೆ ಹಾಲು ಎಂದರೆ ಕದ್ದು ಕುಡಿಯುವಷ್ಟು ಯಾಕಷ್ಟು ಇಷ್ಟವೆಂದರೆ ಅದಕ್ಕೆ ಉತ್ತರ ಗೊತ್ತಿಲ್ಲ. ಮೊದಲು ಮನುಷ್ಯ ಕೃಷಿ ಮಾಡಲೆಂದು ಎತ್ತುಗಳನ್ನು ಸಾಕಿದ. ಆನಂತರ ತನ್ನ ನಿತ್ಯದ ಆಹಾರದ ಜೊತೆಯಲ್ಲಿ ಹಾಲು ಮೊಸರಿನ ಸೇವನೆಗಾಗಿ ಹಸುಗಳನ್ನು ಸಾಕಿದ. ಮನೆಯ ಕಾವಲಿಗೆಂದು ನಾಯಿಗಳನ್ನು ಸಾಕಿದ. ಆದರೆ ಮನೆಯಲ್ಲಿ ತಾನು ಬೆಳೆದ ದವಸ ಧಾನ್ಯಗಳನ್ನು ಇಲಿಗಳಿಂದ ರಕ್ಷಿಸಲು, ಮನೆಯೊಳಗೆ ಬರುವ ಹುಳುಉಪ್ಪಟೆ ಕೀಟಗಳನ್ನು ತೊಲಗಿಸುವ ಸಲುವಾಗಿ  ಬೆಕ್ಕುಗಳನ್ನು ಸಾಕಿರಬಹುದು. ಕ್ರಿ. ಪೂ. ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದಿನಿಂದಲೂ ಬೆಕ್ಕನ್ನು ಮಾನವ ಸಾಕುಪ್ರಾಣಿಯಾಗಿ ಬೆಳೆಸಿದನೆಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಹುಲಿ, ಸಿಂಹ, ಚಿರತೆಗಳು ಸಹ ಬೆಕ್ಕಿನ ಬಳಗಕ್ಕೆ ಸೇರಿದವಾಗಿದ್ದು. ಆದ್ದರಿಂದಲೇ ಸ್ವಾಭಾವಿಕವಾಗಿ ಬೆಕ್ಕು ಮಾಂಸಹಾರಿ ಪ್ರಾಣಿಯಾಗಿದೆ. ಆದರೆ ಯಾವಾಗ ಮಾನವ ಬೆಕ್ಕನ್ನು ಸಾಕುಪ್ರಾಣಿಯಾಗಿ ಸಾಕಲು ಆರಂಭಿಸಿದನೋ ಆಗಿನಿಂದಲೇ ತನ್ನ ಸುತ್ತಲಿನ ಪರಿಸರಕ್ಕೆ ಅವು ಹೊಂದಿಕೊಳ್ಳಲಾರಂಭಿಸಿದವು. ಮನುಷ್ಯ ನೀಡುತ್ತಿದ್ದ ಹಾಲು ಅನ್ನ ಇತ್ಯಾದಿ ಸಸ್ಯಾಹಾರಿ ಆಹಾರವನ್ನು ತಿನ್ನುತ್ತ, ಜೊತೆಜೊತೆಗೆ ತನ್ನ ಮನೆಯೊಡೆಯನ ಮನೆಯಲ್ಲಿ ಇಲಿ, ಕೀಟಗಳನ್ನು ಹಿಡಿದು ತಿನ್ನುತ್ತ ಸಸ್ಯಹಾರಿ ಮತ್ತು ಮಾಂಸಹಾರಿ ಎರಡೂ ಹೌದೆನಿಸಿದವು. ಮೊದಮೊದಲು ಮನುಷ್ಯ ಬೆಕ್ಕನ್ನು ಧಾನ್ಯಗಳ ರಕ್ಷಣೆಗೆಂದು ಸಾಕುತ್ತಿದ್ದ. ಇದೀಗ ಬೆಕ್ಕು ಸಾಕುವುದು ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಅಥವಾ ಹವ್ಯಾಸಕ್ಕೆಂದು ಸಹ ಬೆಕ್ಕುಗಳನ್ನು ಸಾಕಲಾಗುತ್ತಿದೆ. 



ಬೆಕ್ಕಿನ ಕುರಿತಂತೆ ಅಲ್ಲಲ್ಲಿ ಓದಿದ ಕೇಳಿದ ಹಾಗೂ ಅಂತರ್ಜಾಲದಲ್ಲಿ ದೊರೆತ ಆಸಕ್ತಿಕರ ಸಂಗತಿಗಳನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುವೆ.



• ಕಳ್ಳ ಬೆಕ್ಕು ಸದ್ದೇ ಆಗದಂತೆ ಬರುವುದು ಹೇಗೆ ಗೊತ್ತೆ? ಅವುಗಳ ಕಾಲುಗಳಲ್ಲಿ ಮೆದು ಮೆತ್ತೆಗಳು ಇರುವುದರಿಂದ ಅವು ಚಲಿಸುವಾಗ ಶಬ್ದವಾಗುವುದಿಲ್ಲ.



• ಬೆಕ್ಕು ಸುಮಾರು ಹದಿನೈದು ಅಡಿಗಳಷ್ಟು ಎತ್ತರದಿಂದ ನೆಗೆದರೂ ನೇರವಾಗಿ ತಮ್ಮ ಪಾದಗಳ ಮೇಲೆಯೇ ನಿಲ್ಲಬಲ್ಲವು.



• ನೀವು ಎಲ್ಲಿಗೋ ಹೊರಟಾಗ ಬೆಕ್ಕು ನಿಮಗೆ ಅಡ್ಡವಾಗುತ್ತದೆ. ಆಗ ಅಪಶಕುನವೆಂದು ನೀವಂದುಕೊಳ್ಳುತ್ತೀರಿ. ಆದರೆ ನಿಜಸಂಗತಿ ಏನೆಂದರೆ ಬೆಕ್ಕು ಬೇಟೆಯನ್ನು ಹಿಂಬಾಲಿಸುವಾಗ ನೀವೇ ಅದಕ್ಕೆ ಎದುರಾಗಿರುತ್ತೀರಿ.



• ಬೆಕ್ಕು ತನ್ನ ಕಾಲುಗಳಿಂದ ಗುಂಡಿ ತೆಗೆದು ಮಲವನ್ನು ಮಣ್ಣಿನಿಂದ ಮುಚ್ಚುತ್ತದೆ. ಅದಕ್ಕೆ ಕೋಪ ಬಂದಾಗ ಮಾತ್ರ ನಿಮ್ಮ ತಲೆದಿಂಬಿನಲ್ಲೋ ಹೊದಿಕೆಯಲ್ಲೋ ಮಲವನ್ನು ಮಾಡುವ ಮೂಲಕ ಪ್ರತಿಭಟಿಸುವುದು.



• ನಿಮ್ಮ ಮುದ್ದಿನ ಬೆಕ್ಕನ್ನು ಮುದ್ದಿಸಲುಹೋಗುತ್ತೀರಿ. ಆದರೆ ಆ ಬೆಕ್ಕು ನಿಮ್ಮ ಕೈಯಿಗೆ ಬಾಯಿಹಾಕಿ ಕಡಿಯುವಂತೆ ಮಾಡುತ್ತದೆ. ಅದರರ್ಥ ಬೆಕ್ಕು ಏಕಾಂತವನ್ನು ಬಯಸುತ್ತಿದೆ. ಅದರ ಏಕಾಂಗಿತನಕ್ಕೆ ನೀವು ಅಡ್ಡಿಯಾಗುತ್ತಿದ್ದೀರಿ ಎಂದರ್ಥ.



• ಬೆಕ್ಕು ನಿಮ್ಮ ಕುಟುಂಬದಲ್ಲಿ ನಾನೂ ಒಬ್ಬ ಎಂಬುದನ್ನು ಈ ರೀತಿ ಹೇಳುತ್ತದೆ. ಕುಳಿತಿರುವ ನಿಮ್ಮ ಮಡಿಲಿಗೆ ಬಂದು ಮಗುವಿನಂತೆ ಮಲಗುತ್ತದೆ.



• ಓಡಿಬಂದು ಬೆಕ್ಕು ತನ್ನ ದೇಹವನ್ನು ನಿಮ್ಮ ಕಾಲುಗಳಿಗೆ ಉಜ್ಜಿದರೆ ಅದಕ್ಕೆ ನೀವು ತೋರುವ ಪ್ರೀತಿ ಇಷ್ಟವಾಗಿದೆ ಎಂದರ್ಥ.



• ನಿಮ್ಮ ಬೆಕ್ಕು ಮೆಲುದನಿಯಲ್ಲಿ ಒಮ್ಮೆ ಮಿಯಾವ್ ಎಂದರೆ ನಿಮಗೆ ಹಾಯ್ ಹಲೋ ಹೇಳುತ್ತಿದೆ. ಎರಡು-ಮೂರು ಬಾರಿ ಮಿಯಾವ್ ಮಿಯಾವ್ ಎಂದರೆ ಅದಕ್ಕೆ ಹಸಿವಾಗಿರಬಹುದು. ಆಹಾರ ಅಥವಾ ನೀರು ಬೇಕೆಂದು ನಿಮ್ಮಲ್ಲಿ ಕೇಳುತ್ತಿರಬಹುದು.



• ಬೆಕ್ಕು ಮನೆ ಮಹಡಿಯ ಮೇಲೆ ಅಳುತ್ತಿದೆಯೆಂದರೆ ಮನೆಯಲ್ಲಿ ಸಾವು ಸಂಭವಿಸುವುದು. ಅಥವಾ ಯಾವುದೋ ಅಶುಭದ ಮುನ್ಸೂಚನೆ ಎಂದು ನಂಬಲಾಗಿದೆ. ವಾಸ್ತವ ಸಂಗತಿ ಏನೆಂದರೆ ಹೆಣ್ಣು ಬೆಕ್ಕು ಸಂಭೋಗಕ್ಕೆ ಯೋಗ್ಯವಾದಾಗ ಅತ್ತಿಂದಿತ್ತ ಅವಿಶ್ರಾಂತವಾಗಿ ಓಡಾಡುತ್ತ ಹೀಗೆ ವಿಚಿತ್ರವಾಗಿ ಕೂಗಲು ಪ್ರಾರಂಭಿಸುತ್ತದೆ.



• ಸಾಮಾನ್ಯವಾಗಿ ಇವು ಒಂಟಿಜೀವಿಗಳು. ಸಂಭೋಗಕಾಲದಲ್ಲಿ ಮಾತ್ರ ಗಂಡು-ಹೆಣ್ಣು ಜೊತೆಯಾಗುತ್ತವೆ. 



• ವರ್ಷದ ಎಲ್ಲ ಋತುಗಳಲ್ಲಿಯೂ ಬೆಕ್ಕಿಗೆ ಲೈಂಗಿಕ ಆಸಕ್ತಿ ಇರುತ್ತದೆ. ಹೆಣ್ಣು ಬೆಕ್ಕು ಹುಟ್ಟಿದ ಐದು ತಿಂಗಳ ತರುವಾಯ ಗರ್ಭ ಧರಿಸಬಲ್ಲದು ಇತರ ಸ್ತನಿಗಳಂತೆ ಬೆಕ್ಕಿಗೆ ಕೂಡ ಸಂಭೋಗ ಚಕ್ರ ಉಂಟು. 



• ಬೆಕ್ಕುಗಳಿಗೂ ಸಹ ನಮ್ಮಂತೆಯೇ ಎರಡು ರೀತಿಯ ಹಲ್ಲುಗಳು. ಮರಿಗಳಿಗೆ ಆರು ತಿಂಗಳಿದ್ದಾಗ ಹಾಲು ಹಲ್ಲುಗಳು ಉದುರಿ ಸ್ಥಿರ ಹಲ್ಲುಗಳು ಮೂಡುತ್ತವೆ.



• ಬೆಕ್ಕಿನ ಶ್ರವಣಾಂಗಗಳು ಉತ್ತಮವಾಗಿದ್ದು ಶ್ರವಣ ಶಕ್ತಿ ಚುರುಕಾಗಿದೆ. ಮಾನವನದಕ್ಕಿಂತ ಸುಮಾರು 30 ಪಾಲು ಉತ್ತಮ. 



• ರಾತ್ರಿಯಲ್ಲಿ ಟಾರ್ಚ್ ಬೆಳಕು ಬಿದ್ದರೆ ಬೆಕ್ಕಿನ ಕಣ್ಣುಗಳು ಗೋಲಿಯಂತೆ ಮಿಂಚುತ್ತವೆ. ವಾಸ್ತವವಾಗಿ ಪೂರ್ಣ ಕತ್ತಲಿನಲ್ಲಿ ಬೆಕ್ಕು ಕೂಡ ಕುರುಡೇ. ಸಂಪೂರ್ಣ ಕತ್ತಲಿನಲ್ಲಿ ಇದಕ್ಕೆ ದೃಷ್ಟಿ ಸಾಮರ್ಥ್ಯವಿಲ್ಲ. ಮಂದ ಬೆಳಕಿನಲ್ಲಿ ಮಾತ್ರ ಅದು ಉಳಿದ ಸಸ್ತನಿಗಳಿಗಿಂತ ಹೆಚ್ಚು ನಿರ್ದಿಷ್ಟವಾಗಿ ನೋಡಬಲ್ಲದು. 



 • ಬೆಕ್ಕು ಚೊಕ್ಕಟ ಪ್ರಾಣಿ. ತನ್ನ ಶರೀರವನ್ನು ತಾನೇ ಚೊಕ್ಕಟಮಾಡಿ ಕೊಳ್ಳುತ್ತದೆ. ಜನಿಸಿದ ಮರಿಗಳು ತಮ್ಮ ಶರೀರವನ್ನು ಶುಚಿಗೊಳಿಸುವುದನ್ನು ತಾಯಿಯಿಂದ ಕಲಿಯುತ್ತದೆ. 



• ಕೆಲವು ದೇಶಗಳಲ್ಲಿ ಬೆಕ್ಕನ್ನು ಕೊಲ್ಲುವುದು ಮಹಾಪರಾಧವೆಂದು ಪರಿಗಣಿಸಲಾಗಿದೆ. ಅಮೇರಿಕದಲ್ಲಿ ಬೆಕ್ಕು ವನ್ಯಜೀವಿ ಸಂರಕ್ಷಣಾ ಕಾನೂನಿಗೆ ಒಳಪಡುತ್ತದೆ. 




ಒಮ್ಮೆ ನಮ್ಮ ಬಂಧುಗಳ ಮನೆಗೆ ಹೋಗಿದ್ದೆವು. ಅದು ಊಟದ ಸಮಯವಾಗಿತ್ತು. ನಮಗೆ ಕೈಕಾಲು ತೊಳೆದು ಊಟಕ್ಕೆ ಕುಳಿತುಕೊಳ್ಳಲು ಆಹ್ವಾನಿಸಿದರು. ಊಟಕ್ಕೆ ಕುಳಿತು ಮೊದಲ ತುತ್ತು ತಿನ್ನುವ ಮೊದಲೇ ಮನೆಯ ಯಜಮಾನ “ಸೌಭಾಗ್ಯಂದು ಊಟ ಆಯ್ತೇನು?” ತಮ್ಮ ಶ್ರೀಮತಿಯಲ್ಲಿ ವಿಚಾರಿಸಿದರು. ನಮಗೆ ಗೊತ್ತಿರುವಂತೆ ಅವರ ಮನೆಯಲ್ಲಿ ಸೌಭಾಗ್ಯ ಎಂಬ ಹೆಸರಿನ ಹೆಂಗಸಾಗಲೀ ಅಥವಾ ಮಗುವಾಗಲೀ ಇರಲಿಲ್ಲ. ನಾವು ಅಚ್ಚರಿಯಿಂದ ಅವರ ಮುಖವನ್ನು ನೋಡಿದಾಗ “ಸೌಭಾಗ್ಯ ಎಂದರೆ ನಮ್ಮ ಮನೆಯ ಬೆಕ್ಕು. ಹೊಸದಾಗಿ ತಂದಿದ್ದೇವೆ. ಅದಕ್ಕೆ ಸೌಭಾಗ್ಯ ಎಂದು ಹೆಸರಿಟ್ಟಿದ್ದೇವೆ” ಎಂದರು. ಮುಂದೆ ಅನೇಕ ಸಲ ಅವರ ಮನೆಗೆ ಹೋದಾಗೆಲ್ಲ ಸೌಭಾಗ್ಯ ಮನೆಯ ತುಂಬಾ ಓಡಾಡುವುದನ್ನು ನೋಡುತ್ತಿದ್ದೆವು. ಮನೆಯೊಡೆಯನ ಜೊತೆ ಭಾವನಾತ್ಮಕವಾಗಿ ಹೊಂದಿಕೊಂಡಿದ್ದ ಸೌಭಾಗ್ಯ ಅವರ ಜೊತೆ ಆಟವಾಡುತ್ತಿದ್ದಳು. ಅವರ ಹಿಂದುಮುಂದು ಓಡಾಡುತ್ತ ಒಮ್ಮೊಮ್ಮೆ ಅವರಿಗೆ ಕಿರಿಕಿರಿಯನ್ನು ಮಾಡಿದ್ದುಂಟು. ಆ ಮನೆಯ ಮಕ್ಕಳು ಶಾಲೆಯಿಂದ ಬರುವ ಸಮಯಕ್ಕೆ ರಸ್ತೆಗೆ ಹೋಗಿ ಅವರನ್ನು ಸ್ವಾಗತಿಸುತ್ತಿದ್ದಳು. ಅವರೊಂದಿಗೆ ತರಲೆ ತುಂಟಾಟವಾಡುತ್ತಿದ್ದಳು. ಅವರದ್ದು ರೈತಾಪಿ ಕುಟುಂಬವಾಗಿದ್ದು ಅವರ ಮನೆ ಮಣ್ಣಿನ ಮಾಳಿಗೆಯದ್ದಾಗಿತ್ತು. ಮನೆಯ ಯಜಮಾನಿಯೊಮ್ಮೆ “ನಮ್ಮ ಸೌಭಾಗ್ಯ ಮನೆಗೆ ಬಂದಮೇಲೆ ಇಲಿಗಳ ಕಾಟದಿಂದ ಮುಕ್ತಿ ದೊರೆಯಿತು.” ಎಂದು ಸೌಭಾಗ್ಯಳ ಬಗ್ಗೆ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದರು. ಆಗೀಗ ಹೋದಾಗೆಲ್ಲ “ಮೊನ್ನೆ ಮನೆಯ ಅಟ್ಟದಲ್ಲಿ ಹಾವು ಸೇರಿಕೊಂಡಿತ್ತು. ನಮ್ಮ ಸೌಭಾಗ್ಯ ಅದನ್ನು ನೋಡಿ ಹೇಗೆ ಓಡಿಸಿದಳು ಗೊತ್ತಾ? ಅವತ್ತೊಂದಿನ ಅಡಿಗೆಮನೆಯಲ್ಲಿ ಚೇಳಿತ್ತು ನಮ್ಮ ಸೌಭಾಗ್ಯ ನೋಡಿಕೊಳ್ಳದಿದ್ದರೆ ನಮ್ಮ ಮಗುವಿಗೆ ಕಚ್ಚಿ ಬಿಡುತ್ತಿತ್ತೇನೋ..” ಒಂದೊಂದಾಗಿ ಸೌಭಾಗ್ಯಳ ಸಾಹಸವನ್ನು ಹೇಳುತ್ತಿದ್ದರು. ಅನೇಕಸಾರಿ ಸೌಭಾಗ್ಯ ಮರಿಗಳಿಗೆ ಜನ್ಮ ನೀಡಿದಾಗೆಲ್ಲ ತಮ್ಮ ಪರಿಚಯಸ್ಥರಿಗೆ ಬಂಧುಬಳಗದವರಿಗೆಲ್ಲ ಕರೆದು ಹೇಳಿ ಸಾಕುವವರಿಗೆ ಮರಿಗಳನ್ನು ನೀಡಿದ್ದರು. “ಟಿಕ್ಕಿ ಪಿಕ್ಕಿ ಚಿಂಕಿ ಎಂದೆಲ್ಲ ಹೊಸ ರೀತಿಯ ವಿಚಿತ್ರ ಹೆಸರುಗಳನ್ನಿಡುವಾಗ ನೀವೇಕೆ ಸೌಭಾಗ್ಯ ಎಂಬ ಹಳೆಯ ಹೆಸರಿಟ್ಟಿದ್ದೀರಿ?” ಎಂದೊಮ್ಮೆ ಪ್ರಶ್ನಿಸಿದ್ದೆ. ದಂಪತಿಗಳು ಪರಸ್ಪರ ಮುಖನೋಡಿಕೊಂಡು ನಕ್ಕರು. “ಬೆಕ್ಕಿನ ಮರಿಯನ್ನು ಹೊಸದಾಗಿ ತಂದಾಗ ಹೆಸರೇನಿಡಬೇಕೆಂದು ಮನೆಯಲ್ಲಿ ಚರ್ಚಿಸಲಾಯ್ತು. ನೀವು ಹೇಳಿದಂತೆ ನಿಮ್ಮಿ ಪಮ್ಮಿ ಎಂಬ ಹೆಸರುಗಳು ಬಂದುಹೋದವು ಆದರೆ ಇವರ ಮುದ್ದಿನ ಮಗಳು ಸೌಭಾಗ್ಯ ಅಂತಿಡೋಣಪ್ಪ ಅಂದಮೇಲೆ ಅದೇ ಹೆಸರು ಗಟ್ಟಿಯಾಯಿತು” ಎಂದರು ಮನೆಯೊಡತಿ. ಆ ಮಾರ್ಜಾಲಕ್ಕೂ ಸಹ ಸೌಭಾಗ್ಯ ಎಂಬ ಹೆಸರು ಅದೆಷ್ಟು ಒಪ್ಪಿಗೆಯಾಗಿತ್ತೋ ‘ಸೌಭಾಗ್ಯ’ ಎಂದೊಮ್ಮೆ ಕರೆದರು ಸಾಕು ಮನೆಯ ಯಾವ ಮೂಲೆಯಲ್ಲಿದ್ದರು ತಕ್ಷಣವೇ ಎದುರಿಗೆ ಬಂದು ಪ್ರತ್ಯಕ್ಷವಾಗುತ್ತಿತ್ತು. “ಇವಳಿಗೆ ‘ಸೌಭಾಗ್ಯ’ ಎಂಬ ಹೆಸರಿಗಿಂತ ‘ಪ್ರತ್ಯಕ್ಷ’ ಎಂಬ ಹೆಸರು ಸರಿಯಾಗಿ ಒಪ್ಪುತ್ತೆ” ಎಂದೊಮ್ಮೆ ಮನೆಯವರ ಬಳಿ ತಮಾಷೆ ಮಾಡಿದ್ದೆ. “ಹೌದೌದು. ನೀವು ಹೇಳಿದ್ದು ಸರಿ” ಎಂದು ಮನೆಮಂದಿಯೆಲ್ಲ ನಕ್ಕಿದ್ದರು. ನಮ್ಮ ಮಾತುಗಳು ಕಿವಿಗೆ ಬಿದ್ದಿಲ್ಲವೆಂಬಂತೆ ಸೌಭಾಗ್ಯ ಹಾಲಿನ ಬಟ್ಟಲು ಬರಿದಾಗಿಸಿ, ಅಟ್ಟವೇರಿ ತನ್ನ ಶೋಧನೆಯ ಕಾರ್ಯದಲ್ಲಿ ಮಗ್ನಳಾದಳು. ಅದೇನಾಯ್ತೋ ಗೊತ್ತಿಲ್ಲ. ಕೊನೆಯ ಬಾರಿ ಅವರ ಮನೆಗೆ ಹೋದಾಗ ಮನೆಯ ಯಜಮಾನ ಮತ್ತವರ ಶ್ರೀಮತಿ ಸೌಭಾಗ್ಯ ತೀರಿಹೋದ ವಿಷಾದ ಸಂಗತಿಯನ್ನು ತಿಳಿಸಿದರು. ತಮ್ಮ ಮಗುವಿನಂತೆಯೇ ಹಚ್ಚಿಕೊಂಡಿದ್ದ ಪ್ರೀತಿಸುತ್ತಿದ್ದ ಸೌಭಾಗ್ಯಳನ್ನು ನೆನೆದು ಇಬ್ಬರೂ ಚಿಕ್ಕಮಕ್ಕಳಂತೆ ಬಿಕ್ಕಿಬಿಕ್ಕಿ ಅತ್ತರು. ಯಾವುದೋ ಖಾಯಿಲೆಗೆ ತುತ್ತಾಗಿ ಅನ್ನ ಆಹಾರವನ್ನು ಸೇವಿಸದೆ ಸೌಭಾಗ್ಯ ಅಸುನೀಗಿದ್ದಳು. ಈ ಸಂಕಟದ ನಡುವೆ ಮನೆಯಂಗಳದಲ್ಲಿ ಕೆಲವು ದಿನಗಳ ಹಿಂದಷ್ಟೇ ಸೌಭಾಗ್ಯ ಜನ್ಮ ನೀಡಿದ್ದ ಮೂರು ಮರಿಗಳು ಆಟವಾಡುತ್ತಲೇ ಏನನ್ನೋ ಹುಡುಕುತ್ತಿರುವಂತೆ ತೋರುತ್ತಿತ್ತು. ಹಾಗಾದರೆ ಅಷ್ಟು ಪುಟ್ಟ ಮರಿಗಳು ಏನನ್ನು ಹುಡುಕಲು ಸಾಧ್ಯ? ತನ್ನ ಹೆತ್ತಮ್ಮನನ್ನೇ ಹುಡುಕುತ್ತಿರಬೇಕಲ್ಲವೇ?

ಅಂತ್ಯವೇಕೋ ವಿಷಾದವೆನಿಸುತ್ತಿದೆ. ಇಂತಹ ಸಂದರ್ಭಗಳಿಗೆಂದೇ ಹಾಸ್ಯಗಳಿರುವುದು. ಹಿಂದೆಂದೋ ಓದಿದ್ದ ಬೆಕ್ಕಿನ ಕುರಿತ ಕತೆಯೊಂದಿಗೆ ಈ ಬರಹವನ್ನು ಮುಗಿಸುತ್ತಿದ್ದೇನೆ.

ಅದೊಂದು ರೈತ ಕುಟುಂಬ. ಮನೆಯ ಕಾವಲಿಗೆಂದು ರೈತ ನಾಯಿಯನ್ನು ಸಾಕಿದ್ದಾನೆ. ಮನೆಯೊಳಗಿನ ದವಸ ಧಾನ್ಯಗಳನ್ನು ಇಲಿಗಳಿಂದ ರಕ್ಷಿಸುವ ಸಲುವಾಗಿ ಬೆಕ್ಕನ್ನೂ ಸಾಕಿದ್ದಾನೆ. ರೈತನೆಂದ ಮೇಲೆ ಮನೆಯಲ್ಲಿ ಹಾಲು ಕರೆಯುವ ಹಸುಗಳಿರುತ್ತವೆ. ರೈತ ಎರಡಕ್ಕೂ ಹಾಲು ಅನ್ನವಿಟ್ಟು ಸಾಕುತ್ತಿದ್ದಾನೆ. ನಾಯಿ ಬೆಕ್ಕು ಎರಡೂ ಅನ್ಯೋನ್ಯವಾಗಿ ಆಟವಾಡಿಕೊಂಡು ಬೆಳೆಯುತ್ತಿವೆ. ಒಟ್ಟಿಗಿದ್ದರೂ ಅವುಗಳ ಆಲೋಚನೆ ಮಾತ್ರ ಪರಸ್ಪರ ವಿರುದ್ಧವಾಗಿವೆ. ನಿತ್ಯವು ಹಾಲು ಅನ್ನವಿಟ್ಟು ಅಕ್ಕರೆಯಿಂದ ಸಾಕುತ್ತಿರುವ ತನ್ನ ಒಡೆಯನ ಕುರಿತು ನಾಯಿ ಹೀಗೆ ಅಂದುಕೊಳ್ಳುತ್ತೆ. “ಈತ ದೇವರಿರಬೇಕು! ಅದಕ್ಕೆ ನನ್ನನ್ನು ಇಷ್ಟು ಚೆನ್ನಾಗಿ ಸಾಕುತ್ತಿದ್ದಾನೆ.”


ಆದರೆ ಬೆಕ್ಕು ಮಾತ್ರ ಹೀಗೆ ಆಲೋಚಿಸುತ್ತದೆ. “ನಾನು ದೇವರಿರಬೇಕು. ಅದಕ್ಕೆ ಈ ಮನುಷ್ಯ ನನ್ನನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ!”


*****


- ನವೀನ್ ಮಧುಗಿರಿ

25/06/2018