ಮೊದಲ ಭೇಟಿ


ಅಂದು ನನ್ನ ಮತ್ತವಳ ಮೊದಲ ಭೇಟಿಯ ದಿನ. ನಡುಗುತ್ತಿದ್ದ ಜೊತೆಗೆ ಬೆವೆತ ಕೈಗಳನ್ನ ಪರಸ್ಪರ ಹಿಡಿದು ಸುತ್ತಾಡಿದೆವು. ಇಷ್ಟವಾದ ತಿನಿಸುಗಳನ್ನು ತಿಂದಿದ್ದಾಯ್ತು. ಕಷ್ಟ ಸುಖಗಳು, ಇಷ್ಟ ಆಸೆಗಳು, ಕನಸು ಕಲ್ಪನೆಗಳು ವಿನಿಮಯವಾದವು. ಹೊತ್ತು ಯಾರಿಗೂ ಕಾಯುವುದಿಲ್ಲ. ಸಂಜೆಯಾಯ್ತು. ಅವಳು ಇನ್ನಷ್ಟು ಹೊತ್ತು ಜೊತೆಗಿದ್ದರೆ ಚೆಂದವಿತ್ತೆಂದು ಮನಸ್ಸು ಬಯಸಿತ್ತು. ಆದರೂ ಸಮಯ ಇಬ್ಬರನ್ನೂ ಎಚ್ಚರಿಸಿತು. ಬೆಂಗಳೂರೆಂಬ ಮಹಾನಗರದಲ್ಲಿ ನಾನೊಂದು ತೀರ ಅವಳೊಂದು ತೀರ. ಕೆಂಪೆಗೌಡ ಬಸ್ ನಿಲ್ದಾಣವೆಂಬ ಸಾಗರದಲ್ಲಿ ಅವಳು ಹೋಗಬೇಕಿದ್ದ ಬಸ್ ಪ್ಲಾಟ್ ಫಾರಂ ಬಳಿ ಅಲೆಗಳಂತೆ ತೇಲಿ ಹೋದೆವು. ತೀರಕ್ಕೆ ಬಂದ ಅಲೆಗಳು ಮರಳಿ ಕಡಲ ಒಡಲಿಗೆ ಹಿಂತಿರುಗುವಂತೆ  ನಾವು ನಮ್ಮ ಮನೆಗಳಿಗೆ ಮರಳಬೇಕಿತ್ತು. “ಜೊತೆಗೆ ಬರಬೇಕಾ?” ಅಂದೆ. “ಬೇಡ ನನಗೊಬ್ಬಳಿಗೆ ಓಡಾಡಿ ಅಭ್ಯಾಸವಿದೆ. ಭಯವೇನಿಲ್ಲ. ನೀನು ದೂರ ಹೋಗಬೇಕಿದೆ. ತಡವಾಗಬಹುದು, ಹೊರಡು.” ಎಂದವಳು ಬಸ್ಸಿನಲ್ಲಿ ಕುಳಿತಳು. ಅವಳು ಬಸ್ಸಿನೊಳಗೆ ಕಿಟಕಿ ಬದಿಯ ಸೀಟಿನಲ್ಲಿ, ನಾನು ಬಸ್ಸಿನಿಂದ ಹೊರಗೆ ಕಿಟಕಿ ಸನಿಹದಲ್ಲೇ.. ಇಬ್ಬರಿಗೂ ಈ ಸಮಯ ಹೀಗೆ ನಿಂತು ಬಿಡಲಿ ಈ ಬಸ್ಸಿನಂತೆ ಎಂದಾಸೆ. ಆದರೆ ಸಮಯವು ನಿಲ್ಲುವುದಿಲ್ಲ. ಬಸ್ಸು ಸಹ ಹೊರಟು ನಿಂತಿತು. ಅವಳತ್ತ ಕೈಬೀಸಿದೆ. ಅವಳು ಕೈಬೀಸಿದಳು. ಅವಳು ಕೂತಿದ್ದ ಬಸ್ಸು ಹೆಜ್ಜೆ ಮೇಲೆ ಹೆಜ್ಜೆಯಿಟ್ಟಂತೆ ನಿಧಾನವಾಗಿ ಇರುವೆ ಸಾಲಿನಂತಿದ್ದ ಬಸ್ಸುಗಳ ಸಾಲಿನಲ್ಲಿ ಒಂದಾಯಿತು. ಅಷ್ಟೊತ್ತಿಗೆ ನನ್ನ ಕಣ್ಣುಗಳು ಮಂಜಾದವು.. ಆ ರಾತ್ರಿ ರೂಮಿಗೆ ಬಂದವನೇ ಎಲ್ಲಕ್ಕಿಂತ ಮೊದಲು ಮಾಡಿದ ಕೆಲಸ, ಡೈರಿಯಲ್ಲಿ ಈ ಸಾಲುಗಳನ್ನ ಬರೆದಿದ್ದು..


ಮನಸಿಗೂ ತೂಕವುಂಟು!

ಕಿಟಕಿ ಪಕ್ಕದ ಸೀಟಿನಲ್ಲಿ

ಕುಳಿತ ನಿನಗೆ ಕೈ ಬೀಸುವಾಗ

ಬಲು ಭಾರವೆನಿಸಿತ್ತು..


***

- ನವೀನ್ ಮಧುಗಿರಿ

03/01/2021