ರೈತರ ದಿನಕ್ಕಾಗಿ ರೈತನ ಕಿರುಗವಿತೆಗಳು

 




ಒಂದು ಮುಂಜಾನೆಯಲ್ಲಿ

ಎರಡು ದನಿ..

ರೈತನಿಗೆ ಕೋಳಿ ಕೂಗು

ಕವಿಗೆ ಹಕ್ಕಿಗಳ ಹಾಡು

*


ಹತ್ತಾರು ಜನರ

ಬೆವರ ಹನಿ ಜೊತೆಯಲ್ಲಿ

ಹತ್ತಾರು ಕಾಳು

ಒಂದೇ ತೆನೆಯಲ್ಲಿ

*


ಇದೇನಿದು?

ಇದು ರಾಗಿಯ ಹೊಲವೋ

ಬೆವರಿನ ಹೊಲವೋ..

ಅವತ್ತು ಅಪ್ಪ ಬಿತ್ತಿದ್ದು

ಬೆವರನ್ನೇ ತಾನೇ!?

*


ನನ್ನ ಬೆವರುಂಡ 

ಭೂಮಿ

ಹಕ್ಕಿಗಳ ಹಾಡು ಕೇಳುತ್ತಾ 

ಬಸುರಾದಳು

*


ಅಬ್ಬಾ! ಈ ರೈತನೂ

ಕವಿತೆ ಬರೆಯಬಲ್ಲ.

ಇವನು ಗದ್ದೆಯಲ್ಲಿ ಹೂತ

ಸುಂದರ ಪದಗಳೀಗ

ಪೈರಿನ ನೆತ್ತಿಯ ಮೇಲೆ

ಭತ್ತದ ತೆನೆ

*


ಕೆಸರು ಮೆತ್ತಿದ ಅಪ್ಪನ

ಹರಿದ ಅಂಗಿಗೆ ಗೊತ್ತಿಲ್ಲ

ದೇಶವೇ ಉಣ್ಣುವುದು

ತಾನುಂಡು ಬಿಟ್ಟ

ಬೆವರ ಎಂಜಲೆಂಬ ಸತ್ಯ

*


ಅಪ್ಪ

ಕನಸುಗಳ ಬೆಳೆವಾಗ

ಅವ್ವ

ಕಷ್ಟಗಳ ಕಳೆ ಕಿತ್ತಳು

*


ರೈತನ ಬೆವರ ಹನಿ

ಹೊಳೆದಿದೆ

ಎಳೆ ಬಿಸಿಲಿಗೆ

ಪೈರಿನ ನೆತ್ತಿಯ ಮೇಲೆ

ತೆನೆ

*


ರೈತನೆಂದರೆ 

ಕೆಂಪು ಬೆವರಿನ

ಉಪ್ಪುಪ್ಪು ನೆತ್ತರಿನ

ಹಸಿರು ಮನುಷ್ಯ

*


ರೈತನ ಬೆವರಿನಿಂದ ಬೆಳೆದ

ಹಸಿರು ಹೊಲವನ್ನು

ನೋಡಿದ ಕವಿಯೊಬ್ಬ

‘ಉಸಿರು’ ಎಂಬ ಶೀರ್ಷಿಕೆಯಿಟ್ಟು

ಹಸಿರಿನ ಕುರಿತು ಕವಿತೆ ಬರೆದ

*


ಸೌದೆಯ ಹೊರೆ

ಹೊತ್ತ

ಅವ್ವನ ನೆತ್ತಿಯ ಮೇಲೆ

ಸಂಸಾರದ

ಹಸಿವಿನ ಭಾರ

*


ಅಪ್ಪ ಗೆಯ್ಮೆ ಮಾಡಿದ 

ಹೊಲದಲ್ಲಿ 

ಅವ್ವ

ಜೋಳದ ಜೊತೆ 

ಬಿತ್ತುವಳು

ತನ್ನ ಕನಸುಗಳ

*


ರೈತನ ಬೆವರ

ಪದ ಪದಗಳು ಸೇರಿ

ಹೊಲದ ತುಂಬಾ ಹಸಿರು

ತೆನೆ ತೆನೆಯ ಕಾವ್ಯ

*


ರೈತನ ಹೊಲದಲ್ಲಿ

ಬೆಳೆದ ಹೂವಿನ

ಮಕರಂದ ಹೀರುವ

ಜೇನುಹುಳುಗಳು

ಸುಂಕ ಕಟ್ಟುವುದಿಲ್ಲ

***


- ನವೀನ್ ಮಧುಗಿರಿ

23/12/2020