ಕುಛ್ ಭೀ ಹೋತಾ ಹೈ ಆ್ಯಂಡ್ ಐದ್ರುಪಾಯ್ದು ಐತೆ ಸಾರ್...

 


“ಸಾರ್, ಪರಂಗಿ ಹಣ್ಣ್ ಬೇಕಾ? ಹತ್ರೂಪಾಯ್ ಹದ್ನೈದ್ ರೂಪಾಯ್” ಎಂದು ಮೂವರು  ಹುಡುಗರು ಆ ರಸ್ತೆಯಲ್ಲಿ ಹೋಗಿ ಬರುವ ವಾಹನಗಳತ್ತ ನಗುಮುಖ ಮಾಡಿ ಕೇಳುತ್ತಿದ್ದರು. ನಾನು ಸುಮ್ಮನೇ ಮುಂದೆ ಹೋಗುವವನಿದ್ದೆ. ಆದರೆ ನನ್ನಾಕೆಗೆ ಪಪ್ಪಾಯ ಎಂದರಿಷ್ಟ. ಮಗಳಿಗಂತೂ ಯಾವುದೇ ಹಣ್ಣಾಗಲಿ ಬಿಸ್ಕೆಟ್ ಚಾಕೊಲೇಟ್ ಗಳಷ್ಟೇ ಇಷ್ಟ. “ಗಾಡಿ ನಿಲ್ಸು ತಗೊಳ್ಳಣಾ” ಎಂದಳು ನನ್ನವಳು. ನಮ್ಮ ಗಾಡಿ ನಿಧಾನವಾಗುತ್ತಿದ್ದಂತೆ ಎರಡೂ ಕೈಯಲ್ಲಿ ಪರಂಗಿ ಹಣ್ಣುಗಳನ್ನು ಹಿಡಿದು ಮೂವರು ನಮ್ಮತ್ತ ಬಂದರು. ಅವರಲ್ಲಿ ಹತ್ತು ಹನ್ನೆರಡು ವರ್ಷದ ಒಬ್ಬ ಹುಡುಗ, ಅವನದ್ದೇ ವಯಸ್ಸಿನ ಒಂದು ಹೆಣ್ಣುಮಗು, ಮತ್ತೊಬ್ಬ ಆರೇಳು ವರ್ಷದ ಗಂಡು ಹುಡುಗನಿದ್ದ. ಮುಖ ಚಹರೆಯಲ್ಲಿ ಅವರೆಲ್ಲ ಒಂದೇ ಮನೆಯ ಮಕ್ಕಳಿರಬಹುದೆಂದು ಅರ್ಥವಾಯಿತು. “ಯಾಕ್ರೋ ನೀವು ಸ್ಕೂಲಿಗ್ ಹೋಗಲ್ವಾ?”ಎಂದು ಕೇಳಿದೆ. “ಸಾರ್ ನಿಮ್ಗ್ ಯಾವ್ ಪರಂಗೇಣ್ ಬೇಕ್ ನೋಡಿ ಸಾ ಫಸ್ಟು” ಅಂದನೊಬ್ಬ ಹುಡುಗ. ಅದರ ಬೆನ್ನಲ್ಲೇ “ಇದು ಹತ್ರುಪಾಯ್ ಸಾರ್. ಇದು ಹದ್ನೈದ್ ರೂಪಾಯ್ ಸಾರ್” ಅಂದ. ನಾನು ಪರಂಗಿ ಹಣ್ಣಿನ ಕಡೆ ದೃಷ್ಟಿನೆಟ್ಟ ಸಣ್ಣ ಬ್ರೇಕ್ ಸಮಯದಲ್ಲಿ “ಇವಾಗ್ ಎಗ್ಸಾಮೆಲ್ಲ ಆಗ್ಬಿಟ್ವು ಸ್ಕೂಲಿಗ್ ರಜಾ ಐತೆ” ಎಂದು ನನ್ನ ಮೊದಲ ಪ್ರಶ್ನೆಗೂ ಉತ್ತರಿಸಿಬಿಟ್ಟ!

ಆ ಉತ್ತರಭೂಪನ ಕೈಯಲ್ಲಿದ್ದ ಕಳೆಗುಂದಿದ ಹಣ್ಣುಗಳು ನನ್ನ ಮನಸ್ಸಿಗೆ ಹಿಡಿಸಲಿಲ್ಲವೆಂದು ಅವನ ಪಕ್ಕದಲ್ಲೇ ಇದ್ದ ಅವನ ವಾರಗೆಯ ಹುಡುಗಿಗೆ ಅದು ಹೇಗೆ ಗೊತ್ತಾಯಿತು?! “ಇಲ್ನೋಡ್ರಿ ಇದೂ ಹತ್ತ್ ರೂಪಾಯ್, ಇದೂ ಹದ್ನೈದ್ ರೂಪಾಯ್” ಎನ್ನುತ್ತಾ ತನ್ನ ಕೈಯಲ್ಲಿದ್ದ ಹಣ್ಣುಗಳನ್ನು ನಮ್ಮೆದುರು  ತಂದಳು. ನನ್ನಾಕೆ ಹತ್ತು ರೂಪಾಯಿಯ ಹಣ್ಣೊಂದನ್ನು ಆಯ್ಕೆ ಮಾಡಿಕೊಂಡಳು. ಅವರಿಗೆ ಹಣ ನೀಡುವ ಸಲುವಾಗಿ ನನ್ನ ವ್ಯಾಲೇಟ್ ಶೋಧಿಸಿದರೆ ಬರೀ ನೂರು ಇನ್ನೂರು ಐನೂರರ ನೋಟುಗಳೇ. ಚಿಲ್ಲರೆಯೇ ಸಿಗುತ್ತಿಲ್ಲ. ಆ ಹುಡುಗರ ಬಳಿಯೂ ಚಿಲ್ಲರೆ ಇರಲಿಲ್ಲ. ಕೊನೆಯಲ್ಲಿ ನನ್ನವಳ ವ್ಯಾನಿಟಿ ಬ್ಯಾಗಿನಲ್ಲಿ ಹತ್ತು ರೂಪಾಯಿಯ ಹೊಸ ನೋಟೊಂದು ಸಿಕ್ಕಿತು. ಅದರ ಜೊತೆಗೆ ಚಿಲ್ಲರೆ ನಾಣ್ಯದ ಸದ್ದಾಯಿತು. ಎಣಿಸಿದೆ ಏಳು ರೂಪಾಯಿಗಳಿದ್ದವು. ಮಿಂಚಿನ ವೇಗದಲ್ಲಿ ಆ ಹುಡುಗ ಪರಂಗಿ ಹಣ್ಣುಗಳ ರಾಶಿಯ ಬಳಿ ಹೋದವನೇ ಕೈಯಲ್ಲಿ ಚಿಕ್ಕದಾದ ಹಣ್ಣೊಂದನ್ನು ಹಿಡಿದು ಬಂದಿದ್ದ. “ಐದ್ರೂಪಾಯ್ದು ಐತೆ ಸಾರ್. ತಗೊಳ್ರೀ.‌.” ಎಂದು ಹಣ್ಣನ್ನು ಮುಂದೆ ಚಾಚಿದ. ಅವನ ಬುದ್ಧಿವಂತಿಕೆ ಮೆಚ್ಚಿದೆ. ಐದು ರೂಪಾಯಿಯ ಹಣ್ಣನ್ನೂ ಕೊಂಡೆ.

ಮೊನ್ನೆ ನಮ್ಮ ಬಂಧುಗಳ ಊರಿಗೆ ಹೋಗಬೇಕಿತ್ತು. ಅವರದ್ದು ಆಂದ್ರಪ್ರದೇಶದ ಒಂದು ಹಳ್ಳಿ. ನಮ್ಮೂರಿನಿಂದ ಸುಮಾರು ಹನ್ನೆರಡೋ ಹದಿನೈದೋ ಕಿಲೋಮೀಟರ್ ಅಂತರವಷ್ಟೇ. ಅಲ್ಲಿಂದ ಹಿಂತಿರುಗುವಾಗ ನಡೆದ ಘಟನೆಯಿದು. ನಮ್ಮ ಸುತ್ತಮುತ್ತೆಲ್ಲ ಮಳೆಯಿಲ್ಲದೇ ಕೊಳವೆ ಬಾವಿಗಳು ಬರಿದಾಗುತ್ತಿವೆ.  ಹೊಲ ಗದ್ದೆಗಳೆಲ್ಲ ಬರಡು ಭೂಮಿಯಾಗಿವೆ. ತೋಟಗಳು ಒಣಗಿವೆ, ಒಣಗುತ್ತಿವೆ. ದಾರಿಯುದ್ದಕ್ಕೂ ಇದೇ ರೀತಿಯ ದೃಶ್ಯಗಳು ಕಂಡವು. ಎದೆಯಲ್ಲೇನೋ ಸಂಕಟದ ಅನುಭವ. ಜೊತೆಯಲ್ಲಿ ಭವಿಷ್ಯದ ಕುರಿತು ಭಯ. ಇವುಗಳ ನಡುವೆ ಆತ್ಮವಿಶ್ವಾಸದಂತೆ ಪರಂಗಿಹಣ್ಣು ಮಾರುತ್ತಿದ್ದ ಆ ಹುಡುಗರು ಕಂಡರು. ಅವರ ಹೊಲದಲ್ಲಿ ವಾಣಿಜ್ಯ ಕೃಷಿಯಾಗಿ ಬೆಳೆಸಿದ ನೂರಾರು ಪಪ್ಪಾಯದ ಗಿಡಗಳಿವೆ. ಪಪ್ಪಾಯವನ್ನು ಮೈತುಂಬಿಕೊಂಡು ನಿಂತಿವೆ. ಆದರೆ ಇದ್ದಕ್ಕಿದ್ದಂತೆ ಅವರ ಕೊಳವೆಬಾವಿ ಬರಿದಾಗಿದೆ. ಪಪ್ಪಾಯದ ಗಿಡಗಳೆಲ್ಲ ಕಳೆಗುಂದಿವೆ. ಆದರೆ ಆ ಮನೆಯ ಮೂರು ಮಕ್ಕಳು ಇರುವ ಹಣ್ಣುಗಳನ್ನೆಲ್ಲ ಕಿತ್ತು, ಅವರ ತೋಟದ ರಸ್ತೆಬದಿಯಲ್ಲಿಟ್ಟು ಹೀಗೆ ಆತ್ಮವಿಶ್ವಾಸದೊಂದಿಗೆ ಮಾರುತ್ತಿದ್ದಾರೆ.


ಆ ಮಕ್ಕಳ ಆತ್ಮವಿಶ್ವಾಸ ಹಾಗೂ ಬುದ್ಧಿವಂತಿಕೆಯನ್ನು ಕಂಡಾಗ ನನಗೆ ಜಾವೇದ್ ಮಿಯಾದಾದ್ ನೆನಪಾದ. ಈ ಜಾವೇದ್ ಮಿಯಾದಾದ್ ಯಾರಿರಬಹುದೆಂದು ನಿಮ್ಮಲ್ಲೊಂದು ಪ್ರಶ್ನೆ ಮೂಡಿರಬಹುದು. ಅಷ್ಟೇನು ತಲೆಕೆಡಿಸಿಕೊಳ್ಳಬೇಡಿ. ಈ ಜಾವೇದ್ ಮಿಯಾದಾದ್ ಬಹುದೊಡ್ಡ ಶ್ರೀಮಂತ ಉದ್ಯಮಿಯಲ್ಲ. ಸಾಧನೆಗೈದ ಕ್ರೀಡಾಪಟುವಲ್ಲ. ಹೆಸರುವಾಸಿ ರಾಜಕಾರಣಿಯೋ, ಸುಪ್ರಸಿದ್ಧ ಚಿತ್ರನಟನಂತೂ ಅಲ್ಲವೇ ಅಲ್ಲ. ಈ ಜಾವೇದ್ ಮಿಯಾದಾದ್ ಹನ್ನೆರಡು ವರ್ಷದ ಚಿಕ್ಕ ಬಾಲಕ. ಸಮುದ್ರ ತೀರದಲ್ಲಿ ಏಡಿಗಳನ್ನು ಆರಿಸುವುದು ಅವನ ಕಾಯಕ. ಈ ಜಾವೇದ್ ಬಗ್ಗೆ ಇನ್ನಷ್ಟು ತಿಳಿಯಬೇಕೆಂದರೆ ನಿಮಗೆ ಸುಧಾಮೂರ್ತಿಯವರು ಗೊತ್ತಿರಬೇಕು. ಇನ್ಫೋಸಿಸ್ ಎಂದಾಕ್ಷಣ ನಾರಾಯಣ ಮೂರ್ತಿ ಹೇಗೆ ನೆನಪಾಗುವರೋ ಸುಧಾ ಮೂರ್ತಿಯವರು ಹಾಗೇ ನೆನಪಾಗುವರು. ಸುಧಾಮೂರ್ತಿ ಕೇವಲ ನಾರಾಯಣ ಮೂರ್ತಿಯವರ ಮಡದಿಯಾಗಷ್ಟೇ ಪರಿಚಿತರಲ್ಲ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿ ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡವರು. ಜೊತೆಗೆ ಬರವಣಿಗೆಯ ಬಂಡಿಯನ್ನು ಜೊತೆಯಲ್ಲಿ ಎಳೆಯುತ್ತಾ ಬಂದವರು.

ಅವರದ್ದೊಂದು ಪುಸ್ತಕವಿದೆ. ‘ಮನದ ಮಾತು’ ಅದರ ಶೀರ್ಷಿಕೆ. ನವೆಂಬರ್ 2005 ರಲ್ಲಿ ಸಪ್ನ ಬುಕ್ಸ್ ನವರಿಂದ ಮೊದಲ ಮುದ್ರಣ ಕಂಡು ‍ಡಿಸೆಂಬರ್ 2017 ರ ಹೊತ್ತಿಗೆ ಇಪ್ಪತ್ತೊಂದನೇ ಮುದ್ರಣ ಕಂಡಿರುವ ಕೃತಿ. ಅಷ್ಟು ಮಾತ್ರವಲ್ಲದೇ ಭಾರತದ ಹದಿನಾಲ್ಕು ಭಾಷೆಗಳಿಗೂ ಅನುವಾದಗೊಂಡಿದೆ. ಮೂವತ್ತೈದು ಗದ್ಯ ಬರಹಗಳಿರುವ ಈ ಕೃತಿಯಲ್ಲಿನ ಇಪ್ಪತ್ತೈದನೆಯ ಗದ್ಯ ‘ಕುಛ್ ಭೀ ಹೋತಾ ಹೈ’ ನಲ್ಲಿ (ಪುಟ ಸಂಖ್ಯೆ 111 ರಲ್ಲಿ) ನಿಮಗೆ ಜಾವೇದ್ ಪರಿಚಯವಾಗುತ್ತಾನೆ.

ಲೇಖಕಿಯು ಇಲ್ಲಿ ಜಾವೇದ್ ಗಿಂತ ಮೊದಲು ಒರಿಸ್ಸಾ ರಾಜ್ಯದಲ್ಲಿನ ಅವನ ಊರು, ಆ ಊರಿನ ಸಮುದ್ರ, ಆ ಸಮುದ್ರ ತೀರದ ವೈಶಿಷ್ಟ್ಯವನ್ನು  ಮೊದಲು ಪರಿಚಯಿಸುತ್ತಾರೆ. ಆನಂತರ ಕಡಲತೀರದಲ್ಲಿ ಕೆಂಪು ಏಡಿಗಳನ್ನಾರಿಸುತ್ತಿದ್ದ ಜಾವೇದ್'ನನ್ನು ಪರಿಚಯಿಸಿಕೊಳ್ಳುತ್ತಾರೆ.

ಸುಧಾಮೂರ್ತಿಯವರ ಬರಹದ ತುಣುಕನ್ನು ಓದಿ..

ನಮ್ಮ ದೇಶದ ಒರಿಸ್ಸಾ ರಾಜ್ಯದಲ್ಲಿ ಚಂಡೀಪುರವು ನಿದ್ರಿಸುತ್ತಿರುವ ಸಣ್ಣ ಹಳ್ಳಿ. ಬಹುಶಃ ಅನೇಕರಿಗೆ ಅಂಥ ಒಂದು ಹಳ್ಳಿ ಇದೆ ಎಂದೂ ಗೊತ್ತಿರಲಾರದು. ಬಹಳ ಜನರಿಗೆ ಒರಿಸ್ಸಾ ಎಂದಕೂಡಲೇ ಕೊನಾರ್ಕ್ ಸೂರ್ಯದೇವಾಲಯ, ರಘುನಾಥಪುರದ ಪಟಚಿತ್ರ, ಜಗನ್ನಾಥ ಪುರಿಯ ರಥಯಾತ್ರೆ ಕಣ್ಣಮುಂದೆ ಕಾಣುವುದು. ಆದರೆ ಚಂಡೀಪುರವು ನಿಸರ್ಗದ ವರದಾನವಾಗಿದೆ. ಅಂತರಿಕ್ಷ ಕ್ಷಿಪಣಿಯ ವಿಜ್ಞಾನಿಗಳಿಗೆ ಅತ್ಯಂತ ಉಪಯೋಗಕಾರಿಯಾಗಿದೆ. ಇಲ್ಲಿ ಒಂದು ವಿಚಿತ್ರ ನಡೆಯುತ್ತದೆ. ಚಂಡೀಪುರವು ಬಂಗಾಳ ಕೊಲ್ಲಿ ಸಮುದ್ರವನ್ನು ಎದುರಿಸಿ ನಿಲ್ಲುತ್ತದೆ. ಇಲ್ಲಿ ಸಮುದ್ರ ಹಳ್ಳಿಯೊಡನೆ ಕಣ್ಣುಮುಚ್ಚಾಲೆ ಆಡುತ್ತದೆ. ಸಾಮಾನ್ಯವಾಗಿ ಸಮುದ್ರದ ಅಲೆಗಳು ತೀರಕ್ಕೆ ಬಂದು ಬಡಿದು ಒಂದು ಇಪ್ಪತ್ತು ಮೂವತ್ತು ಅಡಿಯಲ್ಲಿ ಹಿಂದೆ ಹೋಗುತ್ತದೆ. ಆದರೆ ಇಲ್ಲಿ ಸಮುದ್ರದ ಅಲೆಗಳು ನದಿಯ ತೆರದಿ ನಿಧಾನವಾಗಿ ಬಂದು ತೀರಕ್ಕೆ ಬಡಿದು ಐದು ಕಿ.ಮೀ. ನಷ್ಟು ಹಿಂತಿರುಗಿ ಹೋಗುತ್ತದೆ. ಇದು ನಿಸರ್ಗದ ಅದ್ಬುತವಲ್ಲವೆ? ಭಾರತ ದೇಶದ ಅಂತರಿಕ್ಷ ಮತ್ತು ಕ್ಷಿಪಣಿ ವಿಭಾಗದವರು ಈ ಭಾಗವನ್ನು ಕ್ಷಿಪಣಿಯನ್ನು ಪರೀಕ್ಷಿಸಲು ಉಪಯೋಗಿಸುತ್ತಾರೆ.

ಚಂಡೀಪುರ ಭುವನೇಶ್ವರದಿಂದ ಸುಮಾರು ಇನ್ನೂರು ಕಿ. ಮೀ ದೂರದಲ್ಲಿದೆ. ಸಮುದ್ರಕ್ಕೆ ಎದುರಾಗಿ ಒಂದು ಅತಿಥಿಗೃಹವು ಇದೆ. ಬಹುಜನರಿಗೆ ಈ ವಿಚಾರವು ಗೊತ್ತಿಲ್ಲದಿರುವುದರಿಂದ ಅತಿಥಿಗೃಹ ತುಂಬಿರುವುದಿಲ್ಲ. ಊರಿನ ಮುಕ್ಕಾಲರಷ್ಟು ಜನರು ಮೀನುಗಾರರಾಗಿದ್ದಾರೆ.

ನಾನೊಂದು ಬಾರಿ ಕೆಲಸದ ಮೇಲೆ ಚಂಡೀಪುರಕ್ಕೆ ಹೋಗಿದ್ದೆ. ಆ ಸಮುದ್ರದ ಮಹತ್ವವನ್ನು ತಿಳಿದ ನಾನು ಬೆಳಗಿನ ಜಾವದಲ್ಲಿ ಸಮುದ್ರದ ತೆರೆಗಳು ಹೆದರಿ ಹಿಂದೆ ಸರಿಯುವುದನ್ನು ನೋಡುತ್ತಲಿದ್ದೆ. ಮೀನುಗಾರರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಸಮುದ್ರ ಹಿಂದೆ ಹೋದಾಗ ಮರಳಿನಿಂದ ಸಾವಿರಾರು ಕೆಂಪು ಏಡಿಗಳು ಹೊರಗೆ ಬರುತ್ತವೆ. ಕೆಲವು ಕ್ಷಣ ಕೆಂಪಾದ ರತ್ನಗಂಬಳಿ ಹಾಸಿದಂತೆವಕಾಣುವುದು. ಚಿಕ್ಕ ಮಕ್ಕಳು ಶಂಖಗಳನ್ನೋ , ಕಪ್ಪೆ ಚಿಪ್ಪುಗಳನ್ನೋ ಆರಿಸುವುದರಲ್ಲಿ ತೊಡಗುತ್ತಿದ್ದರು. ಸ್ವಲ್ಪ ದೊಡ್ಡ ಮಕ್ಕಳು ಕೆಂಪು ಏಡಿಗಳನ್ನು ಆರಿಸಿ ಚೀಲಕ್ಕೆ ಹಾಕುತ್ತಿದ್ದರು. ನೀಳ ಕಾಯದ ಕಪ್ಪು ಬಣ್ಣದ ಮೀನುಗಾರ್ತಿಯರು ಸೀರೆಯನ್ನು ಗಟ್ಟಿಯಾಗಿ ಕಚ್ಚೆಯಂತೆ ಕಟ್ಟಿ ಮೀನುಗಳನ್ನು ಬಲೆಯಿಂದ ಹಿಡಿಯಲು ಸನ್ನದ್ಧರಾಗಿದ್ದರು.

ಮೀನುಗಾರರ ಜೀವನವನ್ನು ನೋಡಿದಾಗಲೆಲ್ಲ ನನಗೆ ತುಂಬಾ ಅಚ್ಚರಿಯೆನಿಸುತ್ತದೆ. ಅವರ ಜೀವನ ನಮಗಿಂತ ಎಷ್ಟೊಂದು ಭಿನ್ನ? ಸದಾ ಕಾಲವು ನೀರಿನೊಡನೆ ಸೆಣಸಾಟ. ಮೀನು ಹಿಡಿಯುವಾಗ ಅವರು ಹೆಚ್ಚು ಮಾತನಾಡಬಾರದು. ಶಬ್ದಕ್ಕೆ ಮೀನು ಹೊರಟು ಹೋಗಿವುದಲ್ಲ! ಅದೊಂದು ನಿರಂತರವಾಗುವ ಏಕಾಂಗಿತನದ ಜೀವನ. ತೀರದಲ್ಲಿ ಕುಳಿತ ನನಗೆ ಮೀನುಗಾರ್ತಿಯರು ತಪಸ್ಸಿಗೆ ಕುಳಿತ ಋಷಿಯಂತೆ ಕಂಡರು.

ಅಷ್ಟರಲ್ಲಿ ಸುಮಾರು ಹನ್ನೆರಡು ವರ್ಷದ ಚಿಕ್ಕ ಬಾಲಕನೊಬ್ಬ ನನ್ನ ಗಮನ ಸೆಳೆದ. ಅವನು ತಾಯಿಯೊಡನೆ ಮೀನ ಬಲೆಯನ್ನು ಹಿಡಿಯುತ್ತಿದ್ದ. ಅವಳಿಗೆ ಅವನ ಸಹಾಯ ಬೇಡವಾದಾಗ ತೀರಕ್ಕೆ ಬಂದು ಕೆಂಪು ಏಡಿಗಳನ್ನು ಆರಿಸಿ ಬುಟ್ಟಿಗೆ ಹಾಕುತ್ತಿದ್ದ. ಒಂದು ಬಾರಿ ದಡಕ್ಕೆ, ಇನ್ನೊಂದು ಬಾರಿ ಸಮುದ್ರಕ್ಕೆ ಅಡುಗೆಮನೆಯಿಂದ ನಡುಮನೆಗೆ ಹೋದಂತೆ ನಿರಾಯಾಸವಾಗಿ ಓಡಾಡುತ್ತಿದ್ದ. ಅವನ ಉತ್ಸಾಹ ಮುಖದಲ್ಲಿ, ಕಾಲಿನಲ್ಲಿ ಕಾಣುತ್ತಿತ್ತು. ನಾನು ಅವನನ್ನು ಹತ್ತಿರ ಕರೆದೆ. ನಾನು ಏಡಿ ಕೊಳ್ಳುತ್ತೇನೆಂದು ಆತ ಧಾವಿಸಿ ಬಂದ. ಆದರೆ ನಾನು ಏಡಿ ಕೊಳ್ಳುವುದಿಲ್ಲ ಅವನೊಡನೆ ಮಾತನಾಡುತ್ತೇನೆಂದಾಗ ಆತ ಸ್ವಲ್ಪವೂ ಕೋಪಮಾಡಿಕೊಳ್ಳದೆ ನನ್ನ ಬದಿಯಲ್ಲಿ ಕುಳಿತ. *

ಇದಿಷ್ಟು ಸುಧಾಮೂರ್ತಿ ಯವರ ಗದ್ಯ ಬರಹದ ತುಣುಕು.  ಜೌವೇದನ ಊರು, ಅಲ್ಲಿನ ಕಡಲ ತೀರ, ಅದರ ವೈಶಿಷ್ಟ್ಯವನ್ನು ಲೇಖಕಿ ಹೀಗೆ ಪರಿಚಯಿಸುತ್ತಾರೆ. ಇಲ್ಲಿಂದ ಮುಂದೆ ಜಾವೇದ್'ನನ್ನು ಪರಿಚಯಿಸಿಕೊಳ್ಳುತ್ತಾರೆ.

ಅವನ ಹೆಸರು ಕೇಳಲು ‘ಜಾವೇದ್ ಮಿಯಾದಾದ್ ಎನ್ನುತ್ತಾನೆ.  ಶಾಲೆಗೂ ಹೋಗುವ ಜಾವೇದ್ ತರಗತಿಯಲ್ಲಿ ಅವನೇ ಮೊದಲ Rank. ಅವನ ತಂದೆ ಸೈಕಲ್ ರಿಕ್ಷಾ ಓಡಿಸುತ್ತಾ ದಿನಕ್ಕೆ ಮೂವತ್ತು ರೂಪಾಯಿ ಸಂಪಾದಿಸಿದರೆ. ಅವನ ತಾಯಿ ಮೀನು ಹಿಡಿಯುತ್ತಾರೆ. ಪ್ರತಿದಿನ ಬೆಳಗ್ಗೆ ಐದಕ್ಕೆ ಏಳುವ ಜಾವೇದ್ ಅಮ್ಮನಿಗೆ ಮೀನು ಹಿಡಿಯಲು ಸಹಾಯ ಮಾಡುತ್ತಾನೆ. ಏಡಿ ಹಿಡಿದು ಮಾರಾಟ ಮಾಡುತ್ತಾನೆ. ಶಾಲೆಗೂ ಹೋಗುತ್ತಾನೆ. ಮತ್ತೆ ಸಂಜೆ ಮನೆಗೆ ಬಂದವನು ಮೀನು ಹಿಡಿಯಲು ಸಮುದ್ರಕ್ಕೆ ಬರುತ್ತಾನೆ. “ಜಾವೇದ್ ನೀನು ಪ್ರತಿದಿನ ಎಷ್ಟು ಗಳಿಸುವೆ?” ಎಂದು ಲೇಖಕಿ ಪ್ರಶ್ನಿಸಿದಾಗ ‘ಐದು ರೂಪಾಯಿ’ ಎಂದು ಬಹಳ ಸಂತೋಷದಿಂದಲೇ ಹೇಳುತ್ತಾನೆ. “ನಿನ್ನ ಶ್ರಮಕ್ಕೆ ಬರೀ ಐದು ರೂಪಾಯಿ! ಅಷ್ಟೇನಾ?” ಎನ್ನುವ ಲೇಖಕಿಯ ಬಳಿ ಜಾವೇದ್ ಹೇಳುವುದು ಹೀಗೆ:

“ಮ್ಯಾಡಂ, ಶೂನ್ಯಕ್ಕಿಂತ ಐದು ರೂಪಾಯಿ ಹೆಚ್ಚಲ್ಲವೇ? ಪಾಂಚ್ ರೂಪಾಯ್ ಮೇ ಕುಛ್ ಭೀ ಹೋತಾ ಹೈ. ನಾವು ಅದರಲ್ಲಿ ಉಪ್ಪು, ಮೆಣಸಿನಕಾಯಿ, ಸೊಪ್ಪು ಕೊಳ್ಳಬಹುದಲ್ಲವೇ? ಸಮುದ್ರದಿಂದ ಮೀನು ಮತ್ತು ಏಡಿ ಪುಕ್ಕಟ್ಟೆಯಾಗಿ ಸಿಕ್ಕುತ್ತದೆ. ಇದರಿಂದ ನಾವು ಯಥೇಚ್ಛವಾಗಿ ಊಟ ಮಾಡಬಹುದಲ್ಲವೇ? ನಾನು ಮನೆಯಲ್ಲಿ ಸುಮ್ಮನೆ ಕುಳಿತರೆ ಉಪ್ಪು ಸಿಕ್ಕುವುದಿಲ್ಲ. ಪ್ರತಿದಿನ ಯಾರೂ ಬಂದು ಹಣವನ್ನು ಪುಕ್ಕಟ್ಟೆಯಾಗಿ ನೀಡುವುದಿಲ್ಲ. ಸುಮ್ಮನೇ ಮನೆಯಲ್ಲಿ ಕುಳಿತು ಕೀಲುಗಳು ತುಕ್ಕು ಹಿಡಿಯುವುದಕ್ಕಿಂತ ಓಡಾಡಿ ಕೀಲು ಸವೆಸುವುದು ಒಳ್ಳೆಯದಲ್ಲವೇ?”
***

ನವೀನ್ ಮಧುಗಿರಿ
23/04/2019